ADVERTISEMENT

ದ್ವೇಷ ಭಾಷಣ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ

ಪಿಟಿಐ
Published 2 ಜನವರಿ 2022, 12:44 IST
Last Updated 2 ಜನವರಿ 2022, 12:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡೆಹ್ರಾಡೂನ್‌: ಹರಿದ್ವಾರದಲ್ಲಿ ಈಚೆಗೆ ನಡೆದ ‘ಧರ್ಮ ಸಂಸತ್’ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿರುವ ಪ್ರಕರಣದ ತನಿಖೆಗೆ ಭಾನುವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ಐವರು ಸದಸ್ಯರನ್ನೊಳಗೊಂಡ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಲಿದೆ. ದ್ವೇಷ ಭಾಷಣ ಮಾಡಿದವರ ವಿರುದ್ಧ ತಕ್ಕ ಸಾಕ್ಷ್ಯಾಧಾರಗಳು ದೊರಕಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈಚೆಗಷ್ಟೇ ಹಿಂದೂ ಧರ್ಮವನ್ನು ಸ್ವೀಕರಿಸಿರುವ ವಾಸಿಂ ರಿಜ್ವಿ(ಜಿತೇಂದ್ರ ನಾರಾಯಣ ತ್ಯಾಗಿ), ಸಾಧ್ವಿ ಅನ್ನಪೂರ್ಣ, ಧರ್ಮದಾಸ್‌, ಸಿಂಧು ಸಾಗರ್‌, ಕಾರ್ಯಕ್ರಮದ ಆಯೋಜಕರಾದ ಯತಿ ನರಸಿಂಹಾನಂದ ಹಾಗೂ ಗಾಜಿಯಾಬಾದ್‌ನ ದಾಸ್ನಾ ದೇವಾಲಯದ ಪ್ರಧಾನ ಅರ್ಚಕರ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಡಿಸೆಂಬರ್‌ 16ರಿಂದ 19ರವರೆಗೆ ನಡೆದಿದ್ದ ಧರ್ಮಸಂಸತ್‌ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಉತ್ತರಾಖಂಡದ ಬಿಜೆಪಿ ಸರ್ಕಾರದ ಮೇಲೆ ವಿವಿಧೆಡೆಯಿಂದ ಒತ್ತಡ ಬಂದಿತ್ತು.

ಈ ಕಾರ್ಯಕ್ರಮವು ಉತ್ತರಪ್ರದೇಶದ ಶಾಂತಿ ಹಾಗೂ ಸಹಬಾಳ್ವೆಯ ಸಂಪ್ರದಾಯಕ್ಕೆ ಕಳಂಕ ತಂದೊಡ್ಡಿದೆ ಎಂದು ಆರೋಪಿಸಿ ಉತ್ತರ ಪ್ರದೇಶ ಮತ್ತು ಹರಿಯಾಣದ ನಿವೃತ್ತ ಪೊಲೀಸ್‌ ಅಧಿಕಾರಿಗಳು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಪತ್ರ ಬರೆದಿದ್ದರು.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಮರು ಡೆಹ್ರಾಡೂನ್‌ ಮತ್ತು ಹರಿದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.