ADVERTISEMENT

ಸೇನೆಗೆ ಸೇರಬೇಕೆಂಬ ಅಪ್ಪನ ಆಸೆ ಈಡೇರಿಸಿದ್ದ ಹುತಾತ್ಮ ಕರ್ನಲ್ ಸಂತೋಷ್ ಬಾಬು

ಪಿಟಿಐ
Published 16 ಜೂನ್ 2020, 17:53 IST
Last Updated 16 ಜೂನ್ 2020, 17:53 IST
ಕರ್ನಲ್ ಸಂತೋಷ್ ಬಾಬು
ಕರ್ನಲ್ ಸಂತೋಷ್ ಬಾಬು   

ಹೈದರಾಬಾದ್‌: ಚೀನಾ ಸೇನಾಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರು, ಸೇನೆಗೆ ಸೇರಿ ದೇಶ ಸೇವೆ ಮಾಡುವ ಮೂಲಕ ತಮ್ಮ ತಂದೆಯ ಕನಸನ್ನು ಈಡೇರಿಸಿದ್ದರು.

ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿಬಾಬು ಮತ್ತು ಇನ್ನಿಬ್ಬರು ಯೋಧರು ಹುತಾತ್ಮರಾಗಿದ್ದರು.

ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ತಮಗೆ ಸಾಧ್ಯವಾಗಿರಲಿಲ್ಲ ಆದರೆ, ಆ ಕನಸನ್ನು ನನ್ನ ಮಗ ಈಡೇರಿಸಿದ್ದಾನೆ ಎಂದು ಬಾಬು ಅವರ ತಂದೆ ಬಿ.ಉಪೇಂದರ್‌ ಅವರು ಹೇಳಿಕೊಂಡಿದ್ದಾರೆ. ಬ್ಯಾಂಕ್‌ ಉದ್ಯೋಗಿಯಾಗಿ ನಿವೃತ್ತರಾಗಿರುವ ಅವರು,‘ಸೈನ್ಯಕ್ಕೆ ಸೇರಲು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ನಾನು ನನ್ನ ಮಗ ಸೇನೆಗೆ ಸೇರಲಿ ಎಂದು ಬಯಸಿದ್ದೆ. ಆದರೆ, ಆದನ್ನು ನನ್ನ ಸಂಬಂಧಿಕರು ವಿರೋಧಿಸಿದ್ದರು’ ಎಂದು ತಿಳಿಸಿದ್ದಾರೆ.

ಬಾಬು ಭಾನುವಾರ ರಾತ್ರಿ ತಮ್ಮೊಂದಿಗೆ ಕೊನೆಯ ಸಲ ಮಾತನಾಡಿದ್ದರು ಎಂದು ಅವರ ತಾಯಿಹೇಳಿಕೊಂಡಿದ್ದಾರೆ. ಈ ವೇಳೆಭಾರತ–ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸನ್ನಿವೇಶದ ಬಗ್ಗೆ ವಿಚಾರಿಸಿದ್ದೆ. ಆದರೆ, ಇದುಸೂಕ್ಷ್ಮ ವಿಚಾರವಾದುದ್ದರಿಂದ ಅದರ ಬಗ್ಗೆ ಮಾತನಾಡದಂತೆ ತಿಳಿಸಿದ್ದ. ಹಾಗಾಗಿ ‘ಹುಷಾರಾಗಿರು ಎಂದುಹೇಳಿದ್ದೆ’ ಎಂದುತಿಳಿಸಿದ್ದಾರೆ.

ಮುಂದುವರಿದು, ‘ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ಹೆಮ್ಮೆ ಇದೆ’ ಎಂದೂ ತಿಳಿಸಿದ್ದಾರೆ.

2004ರಲ್ಲಿ ಸೇನೆಗೆ ಸೇರಿದ್ದ ಬಾಬು, ಜಮ್ಮು ಮತ್ತು ಕಾಶ್ಮೀರದಲ್ಲಿ ವೃತ್ತಿ ಆರಂಭಿಸಿದ್ದರು. ಅವರುತೆಲಂಗಾಣದ ಸೂರ್ಯಪೇಟೆಯರಾಗಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ನೆರವಾಗುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಮಾತ್ರವಲ್ಲದೆ, ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಕಾರ್ಯದ ಮೇಲ್ವಿಚಾರಣೆ ವಹಿಸುವಂತೆ ಸಚಿವ ಜಗದೀಶ್‌ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ.

ಬಿಹಾರದ–16 ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು ಅವರ ಪತ್ನಿ, ಮಗಳು ಮತ್ತು ಮಗ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಶೀಘ್ರವೇ ಹೈದರಾಬಾದ್‌ಗೆ ವರ್ಗಾವಣೆಯಾಗುವ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ.

ಮೃತದೇಹವನ್ನು ಬುಧವಾರ ತವರಿಗೆ ತರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಆರ್‌.ಭಾಸ್ಕರನ್‌ ಮಾಹಿತಿ ನೀಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.