ADVERTISEMENT

ಸಾಮಾಜಿಕ ಜಾಲತಾಣಕ್ಕೆ ಆಧಾರ್‌

ತಮಿಳುನಾಡು, ಕೇಂದ್ರದ ವಾದ ವಿರೋಧಿಸಿದ ಫೇಸ್‌ಬುಕ್‌

ಪಿಟಿಐ
Published 19 ಆಗಸ್ಟ್ 2019, 19:38 IST
Last Updated 19 ಆಗಸ್ಟ್ 2019, 19:38 IST
   

ನವದೆಹಲಿ: ಸುಳ್ಳು ಸುದ್ದಿ, ಮಾನಹಾನಿಕರ ಮತ್ತು ಅಶ್ಲೀಲ ವಿಚಾರ ಹರಡುವುದನ್ನು ತಡೆಯಲುಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ತಮಿಳುನಾಡು ಸರ್ಕಾರ ಈ ಸಲಹೆ ನೀಡಿದೆ. ಆದರೆ, ಫೇಸ್‌ಬುಕ್‌ ಇದನ್ನು ವಿರೋಧಿಸಿದೆ. ಆಧಾರ್‌ ಸಂಖ್ಯೆ ಮತ್ತು ಬಯೊಮೆಟ್ರಿಕ್‌ ಗುರುತನ್ನು ಜೋಡಣೆ ಮಾಡುವುದು ಬಳಕೆದಾರರ ಖಾಸಗಿತನ ನೀತಿಯ ಉಲ್ಲಂಘನೆಯಾಗುತ್ತದೆ ಎಂದು ಫೇಸ್‌ಬುಕ್‌ ವಾದಿಸಿದೆ.

ಸುಳ್ಳು ಸುದ್ದಿ ಮತ್ತು ಮಾನಹಾನಿಕರ ವಿಚಾರಗಳ ಹರಡುವಿಕೆ ತಡೆಯುವುದರ ಜತೆಗೆ ದೇಶವಿರೋಧಿ ಮತ್ತು ಭಯೋತ್ಪಾದನೆಗೆ ಸಂಬಂಧಿಸಿ ವಿಚಾರಗಳನ್ನು ಹಂಚಿಕೊಳ್ಳುವುದನ್ನೂ ಆಧಾರ್‌ ಜೋಡಣೆಯಿಂದ ತಡೆಯುವುದಕ್ಕೆ ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು.

ADVERTISEMENT

ಸಂದೇಶಗಳು ಗೂಢಲಿಪಿ ರೂಪದಲ್ಲಿ ರವಾನೆ ಆಗುತ್ತವೆ ಎಂದು ವಾಟ್ಸ್‌ಆ್ಯಪ್‌ನ ಪ‍್ರಾಯೋಜಕ ಸಂಸ್ಥೆಯು ವಾದಿಸುತ್ತಿದೆ. ಆದರೆ, ಸಂದೇಶವನ್ನು ಸೃಷ್ಟಿಸಿದವರು ಯಾರು ಎಂಬುದನ್ನು ಪತ್ತೆ ಮಾಡಲು ಸಾಧ್ಯ ಎಂದು ಐಐಟಿಯ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂದು ಕೋರಿ ಮದ್ರಾಸ್‌, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಫೇಸ್‌ಬುಕ್‌ ಕೋರಿದೆ. ಇದನ್ನು ವೇಣುಗೋಪಾಲ್‌ ವಿರೋಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಸಂಖ್ಯೆಯ ಜೋಡಣೆ ಆದರೂ ಅದನ್ನು ಮೂರನೆಯವರ ಜತೆಗೆ ಕಂಪನಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ವಾಟ್ಸ್‌ಆ್ಯಪ್‌ನ ಸಂದೇಶಗಳು ಸಂಪೂರ್ಣವಾಗಿ ಗೂಢಲಿಪಿಯಲ್ಲಿರುತ್ತವೆ. ಸಂಸ್ಥೆಗೂ ಅದು ಏನೆಂದು ತಿಳಿಯುವುದಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ.

ಖಾಸಗಿ ಸಂಸ್ಥೆಯ ಜತೆಗೆ ಆಧಾರ್‌ ಸಂಖ್ಯೆ ಹಂಚಿಕೊಳ್ಳುವುದಕ್ಕೆ ಅವಕಾಶ ಇದೆಯೇ ಎಂಬುದು ಮೊದಲು ತೀರ್ಮಾನ ಆಗಬೇಕಿದೆ ಎಂದು ಫೇಸ್‌ಬುಕ್‌ ಪರ ವಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ ಹೇಳಿದರು.

ಸಾರ್ವಜನಿಕ ಹಿತಕ್ಕಾಗಿ ಆಧಾರ್‌ ಸಂಖ್ಯೆಯನ್ನು ಖಾಸಗಿ ಸಂಸ್ಥೆಗೆ ನೀಡಬಹುದು ಎಂದು ಹೇಳುವ ಸುಗ್ರೀವಾಜ್ಞೆ ಇದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.