ADVERTISEMENT

ಅಂಬಾನಿ ಮನೆ ಬಳಿ ಸ್ಕಾರ್ಪಿಯೊ ಪತ್ತೆ ಪ್ರಕರಣ ಎನ್‌ಐಎಗೆ: ಏನೋ ಅಡಗಿದೆ ಎಂದ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 2:53 IST
Last Updated 9 ಮಾರ್ಚ್ 2021, 2:53 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ (ಪಿಟಿಐ)
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ (ಪಿಟಿಐ)   

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಪೋಟಕಗಳನ್ನು ತುಂಬಿದ ವಾಹನವನ್ನು ಜಪ್ತಿ ಮಾಡಿರುವ ಪ್ರಕರಣದ ತನಿಖೆಯನ್ನು ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೆತ್ತಿಕೊಂಡಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಎನ್‌ಐಎ ಈ ಪ್ರಕರಣ ವನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ತನಿಖಾ ಸಂಸ್ಥೆಯ ವಕ್ತಾರರು ಸೋಮವಾರ ತಿಳಿಸಿದರು.

ಈ ಬೆಳವಣಿಗೆಯು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರದ ಹುಬ್ಬೇರುವಂತೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ 'ಈ ಪ್ರಕರಣದಲ್ಲಿ ಏನೋ ಇದೆ. ಆದ್ದರಿಂದಲೇ ಎನ್‌ಐಎ ತನಿಖೆಯನ್ನು ವಹಿಸಿಕೊಂಡಿದೆ. ಅದೇನೆಂದು ನಾವು ಖಚಿತವಾಗಿ ಬಯಲಿಗೆಳೆಯುತ್ತೇವೆ. ವಿರೋಧ ಪಕ್ಷಕ್ಕೆ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ,' ಎಂದು ಹೇಳಿದರು.

ADVERTISEMENT

ಎಸ್‌ಯುವಿ ಪತ್ತೆಯಾದ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿದ್ದರೂ, ಎಸ್‌ಯುವಿ ಒಡೆತನ ಹೊಂದಿರುವ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಸಾವಿನ ಬಗ್ಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ಮುಂದುವರಿಸಲಿದೆ ಎಂದು ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರವೂ 'ಸ್ಕಾರ್ಪಿಯೊ' ಪ್ರಕರಣವನ್ನು ಭಯೋತ್ಪಾದನ ನಿಗ್ರಹ ಪಡೆ (ಎಟಿಎಸ್‌)ಗೆ ವಹಿಸಿತ್ತು. ಅದರ ಮರುದಿನವೇ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿದೆ.

ಫೆಬ್ರುವರಿ 25ರಂದು ಮುಂಬೈನ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಸಮೀಪ 20 ಜಿಲೆಟಿನ್‌ ಕಡ್ಡಿಗಳಿದ್ದ ಸ್ಕಾರ್ಪಿಯೊ ವಾಹನ ಪತ್ತೆಯಾಗಿತ್ತು. ಪೊಲೀಸರು ಅದನ್ನು ಜಪ್ತಿ ಮಾಡಿದ್ದರು. ‌

ಸಂಸದ ಮೋಹನ್‌ ಡೆಲ್ಕರ್‌ ಪ್ರಕರಣದ ಆಳ ತನಿಖೆ: ಠಾಕ್ರೆ

ಹಲವರ ಹೆಸರುಗಳನ್ನು ಉಲ್ಲೇಖಿಸಿ, ಅನುಮಾನಾಸ್ಪದವಾಗಿ ಮೃತಪಟ್ಟಿರುವ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆ ಬಗ್ಗೆ ಆಳವಾದ ತನಿಖೆ ನಡೆಸುವುದಾಗಿಯೂ, ತಪ್ಪಿತಸ್ಥರನ್ನು ದಂಡಿಸುವುದಾಗಿಯೂ ಠಾಕ್ರೆ ತಿಳಿಸಿದರು.

ಸಂಸದ ಮೋಹನ್‌ ಡೇಲ್ಕರ್‌ (58) ಅವರ ಶವ ಮಾ.1ರಂದು ದಕ್ಷಿಣ ಮುಂಬೈನ ಮರಿನಾ ಡ್ರೈವ್‌ ಹೋಟೆಲ್‌ನಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.