ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)
ನವದೆಹಲಿ: ಶೀಘ್ರವೇ ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಜನಗಣತಿ ಮಾಡದಿರುವುದರಿಂದ ಸುಮಾರು 14 ಕೋಟಿ ಮಂದಿ ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಉಚಿತ ಮತ್ತು ಸಬ್ಸಿಡಿ ಆಹಾರ ಧಾನ್ಯಗಳ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತಾ ಕಾಯ್ದೆಯ ಫಲಾನುಭವಿಗಳನ್ನು 2011ರ ಜಾತಿಗಣತಿ ಅನ್ವಯ ಗುರುತಿಸಲಾಗುತ್ತಿದೆ. ಹೀಗಾಗಿ ಹಲವರು ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ.
‘ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 10 ವರ್ಷಕ್ಕೊಮ್ಮೆ ನಡೆಸುವ ಜನಗಣತಿ 4 ವರ್ಷ ವಿಳಂಬವಾಗಿದೆ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಇನ್ನು ಯಾವಾಗ ನಡೆಯಲಿದೆ ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ’ ಎಂದು ಅವರು ಹೇಳಿದ್ದಾರೆ.
ಈ ವರ್ಷವೂ ಜನಗಣತಿ ನಡೆಯುವ ಸಾಧ್ಯತೆ ಇಲ್ಲ ಎನ್ನುವುದು ಬಜೆಟ್‌ನಲ್ಲಿ ಮೀಸಲಿರಿಸಿದ ಅನುದಾನದಿಂದ ಗೊತ್ತಾಗುತ್ತದೆ. ಸುಮಾರು 14 ಕೋಟಿ ಅರ್ಹ ಭಾರತೀಯರು ಆಹಾರ ಭದ್ರತೆ ಕಾಯ್ದೆಯಡಿ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ’ ಎಂದು ಸೋನಿಯಾ ಹೇಳಿದ್ದಾರೆ.
2013ರ ಸೆಪ್ಟೆಂಬರ್‌ನಲ್ಲಿ ಯುಪಿಎ ಸರ್ಕಾರವು ಪರಿಚಯಿಸಿದ ಈ ಕಾಯ್ದೆಯು ದೇಶದ 14 ಕೋಟಿ ಜನಸಂಖ್ಯೆಗೆ ಪೌಷ್ಠಿಕ ಆಹಾರದ ಲಭ್ಯತೆಯನ್ನು ಖಾತ್ರಿ ಪಡಿಸುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಲಕ್ಷಾಂತರ ದುರ್ಬಲ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ ಈ ಕಾಯ್ದೆಯು ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಸೋನಿಯಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.