ADVERTISEMENT

ಬಡವರ, ರೈತರ ಬೆನ್ನು ಮುರಿಯುತ್ತಿರುವ ಕೇಂದ್ರ ಸರ್ಕಾರ: ಸೋನಿಯಾ ವಾಗ್ದಾಳಿ

ಏಜೆನ್ಸೀಸ್
Published 7 ಜನವರಿ 2021, 15:18 IST
Last Updated 7 ಜನವರಿ 2021, 15:18 IST
   

ನವದೆಹಲಿ: ರೈತರ ಪ್ರತಿಭಟನೆ ಮತ್ತು ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸ್ವಾತಂತ್ರ್ಯ ದೊರೆತ ನಂತರ ಮೊದಲ ಬಾರಿಗೆ ದೇಶವು ಅಡ್ಡಹಾದಿಯಲ್ಲಿ ಬಂದು ನಿಂತಿದೆ ಎಂದು ಅವರು ಆರೋಪಿಸಿದ್ದಾರೆ.

ಇಂಧನ ಬೆಲೆ ಹೆಚ್ಚಳ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸೋನಿಯಾ ಗಾಂಧಿ, 'ದುರಂತವೊಂದನ್ನು ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಅವಕಾಶವನ್ನಾಗಿ ಸರ್ಕಾರವು ಪರಿವರ್ತಿಸಿಕೊಂಡಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರವು ತನ್ನ 'ಅಸೂಕ್ಷ್ಮತೆ'ಯಿಂದಾಗಿ ಬಡವರು, ರೈತರು ಮತ್ತು ಮಧ್ಯಮ ವರ್ಗದವರ ಬೆನ್ನನ್ನು ಮುರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ

'ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವು ಇಂದು ಅಡ್ಡಹಾದಿಯಲ್ಲಿ ಬಂದು ನಿಂತಿದೆ. ಒಂದೆಡೆ, ದೇಶದ ಅನ್ನದಾತರು ಕಳೆದ 44 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಧರಣಿ ನಡೆಸುತ್ತಿದ್ದಾರೆ. ಸೂಕ್ಷ್ಮವಲ್ಲದ ಮತ್ತು ನಿರ್ದಯಿ ಬಿಜೆಪಿ ಸರ್ಕಾರ ಬಡವರು, ರೈತರು ಮತ್ತು ಮಧ್ಯಮ ಬೆನ್ನನ್ನು ಮುರಿಯುವಲ್ಲಿ ನಿರತವಾಗಿದೆ' ಎಂದು ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.

'ಮೂರು ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಪಡಿಸಬೇಕು. ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾನು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ' ಎಂದು ಸೋನಿಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, 'ಸರ್ಕಾರವು ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಅವರು, 'ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುವ ಮೂಲಕ ಮೋದಿ ಸರ್ಕಾರ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ. ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಯಡಿಗೆ ತರಲು ಸರ್ಕಾರ ಸಿದ್ಧವಿಲ್ಲದಿರುವುದೇ ಇದಕ್ಕೆ ಕಾರಣ' ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.