ADVERTISEMENT

ಮನಮೋಹನ ಸಿಂಗ್ ಸ್ಮಾರಕ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರಕ್ಕೆ ಎಸ್‌ಪಿ–ಬಿಎಸ್‌ಪಿ

ಪಿಟಿಐ
Published 28 ಡಿಸೆಂಬರ್ 2024, 5:15 IST
Last Updated 28 ಡಿಸೆಂಬರ್ 2024, 5:15 IST
   

ಲಖನೌ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ಮತ್ತು ಸ್ಮಾರಕದ ವಿಚಾರವಾಗಿ ರಾಜಕೀಯ ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್, ‘ದೇಶದ ಮಾಜಿ ಪ್ರಧಾನಿಯನ್ನು ಗೌರವಿಸುವ ಸಾಂಪ್ರದಾಯವನ್ನು ಎತ್ತಿಹಿಡಿಯಬೇಕು. ಈ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂದಿದ್ದಾರೆ.

‘ಮನಮೋಹನ ಸಿಂಗ್‌ ಅವರ ಸ್ಮಾರಕವನ್ನು ರಾಜ್‌ಘಾಟ್‌ನಲ್ಲಿ ನಿರ್ಮಿಸಬೇಕು. ಈ ವಿಚಾರದಲ್ಲಿ ಬಿಜೆಪಿಯು ತನ್ನ ಸಂಕುಚಿತ ಮನೋಭಾವನೆಯನ್ನು ಬಿಡಬೇಕು. ಇಂತಹ ನಕಾರಾತ್ಮಕ ಧೋರೆಣೆಯನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಇನ್ನು, ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, ‘ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬದವರು ಇಚ್ಛಿಸುವ ಸ್ಥಳದಲ್ಲಿಯೇ ನಡೆಸಬೇಕು. ಆ ಮೂಲಕ ಸಿಂಗ್ ಅವರ ಕುಟುಂಬದ ಭಾವನೆಗಳನ್ನು ಗೌರವಿಸಬೇಕು. ಈ ವಿಷಯದಲ್ಲಿ ರಾಜಕೀಯ ಬೇಡ’ ಎಂದಿದ್ದಾರೆ.

ಮನಮೋಹನ ಸಿಂಗ್ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮಬೋಧದಲ್ಲಿ ನಡೆಸಲು ಮುಂದಾದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಮಾರಕ ನಿರ್ಮಾಣವಾಗುವ ಸ್ಥಳದಲ್ಲಿಯೇ ಸಿಂಗ್ ಅವರ ಅಂತ್ಯಕ್ರಿಯೆ ನಡೆಸಬೇಕು ಎಂದು ಶುಕ್ರವಾರ ಪತ್ರ ಬರೆದು ಒತ್ತಾಯಿಸಿದ್ದರು.

ಇಂದು ಖರ್ಗೆ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವಾಲಯ, ‘ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುತ್ತೇವೆ’ ಎಂದು ಭರವಸೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.