ADVERTISEMENT

ಲೋಕಸಭೆ: ಕ್ರೀಡಾ ಮಸೂದೆಗೆ ಅಂಗೀಕಾರ

ಕ್ರೀಡಾಕ್ಷೇತ್ರದಲ್ಲಿ ಆದ ಅತಿದೊಡ್ಡ ಸುಧಾರಣೆ– ಸಚಿವ ಮಾಂಡವೀಯ ಬಣ್ಣನೆ

ಪಿಟಿಐ
Published 11 ಆಗಸ್ಟ್ 2025, 10:58 IST
Last Updated 11 ಆಗಸ್ಟ್ 2025, 10:58 IST
   

ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ಪಡೆಯಿತು. ಸ್ವಾತಂತ್ರ್ಯಾನಂತರ ಭಾರತದ ಕ್ರೀಡಾಕ್ಷೇತ್ರದಲ್ಲಿ ಆದ ಅತಿದೊಡ್ಡ ಸುಧಾರಣೆ ಇದು ಎಂದು ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಅವರು ಬಣ್ಣಿಸಿದರು.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವಿರೋಧ ಪಕ್ಷಗಳ ಪ್ರತಿಭಟನೆಯ–ಗದ್ದಲದ ನಡುವೆಯೇ ಮಸೂದೆಗೆ ಒಪ್ಪಿಗೆ ಪಡೆಯಲಾಯಿತು. ಗದ್ದಲದ ನಂತರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಪುನರಾರಂಭವಾದಾಗ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆಯನ್ನೂ ಅಂಗೀಕರಿಸಲಾಯಿತು.

‘ಈ ಮಸೂದೆಯ ಉತ್ತರದಾಯಿತ್ವ, ನ್ಯಾಯದ ಖಾತರಿ, ಕ್ರೀಡಾ ಫೆಡರೇಷನ್‌ಗಳಲ್ಲಿ ಉತ್ತಮ ಆಡಳಿತವನ್ನು ಖಾತರಿಪಡಿಸಲಿದೆ’ ಎಂದು ಮಾಂಡವೀಯ ವಿರೋಧ ಪಕ್ಷಗಳ ಘೋಷಣೆಗಳ ನಡುವೆ ಹೇಳಿದರು.

ADVERTISEMENT

‘ಭಾರತದ ಕ್ರೀಡಾ ವ್ಯವಸ್ಥೆಯಲ್ಲಿ ಅತಿ ಮಹತ್ವದ ಮಸೂದೆಯಿದು. ಇಂಥ ಮಸೂದೆಯ ಅಂಗೀಕಾರದ ವೇಳೆ ವಿರೋಧ ಪಕ್ಷಗಳು ಭಾಗಿಯಾಗದೇ ಇರುವುದು ದುರದೃಷ್ಟಕರ’ ಎಂದು ಮಾಂಡವೀಯ ಅಸಮಾಧಾನ ವ್ಯಕ್ತಪಡಿಸಿದರು.

ಮಸೂದೆಗಳನ್ನು ಮಂಡಿಸುವಾಗ ಮತ್ತು ಅಂಗೀಕರಿಸುವಾಗ ವಿರೋಧ ಪಕ್ಷದ ನಾಯಕರು ಸದನದಲ್ಲಿ ಇರಲಿಲ್ಲ. ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಮೆರವಣಿಗೆಯಲ್ಲಿ ತೆರಳುವ ವೇಳೆ ಹೆಚ್ಚಿನ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.  

ಇದಕ್ಕೆ ಮೊದಲು, ಕ್ರೀಡೆಯ ಮೇಲಿನ ಸಂಸದೀಯ ಸಮಿತಿಯ ಅಧ್ಯಕ್ಷ ದಿಗ್ವಿಜಯ ಸಿಂಗ್ ಅವರು, ಕ್ರೀಡಾ ಆಡಳಿತ ಮಸೂದೆಯನ್ನು ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದರು. ಸಂಸತ್ತಿನಲ್ಲಿ ಮಂಡಿಸುವ ಮೊದಲು ಇದರ ಬಗ್ಗೆ ಸಮಗ್ರ ಚರ್ಚೆ ಮತ್ತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದಿದ್ದರು.

2036ರ ಒಲಿಂಪಿಕ್ಸ್‌ ಆತಿಥ್ಯದ ಬಿಡ್‌ಗೆ ಭಾರತ ಯತ್ನಿಸುತ್ತಿದ್ದು, ಇಂಥ ಸಂದರ್ಭದಲ್ಲಿ ಪಾರದರ್ಶಕ, ಉತ್ತರದಾಯಿತ್ವ ಮತ್ತು ವಿಶ್ವ ದರ್ಜೆಯ ಕ್ರೀಡಾ ವ್ಯವಸ್ಥೆ ನಿರ್ಮಿಸುವ ಆಶಯಕ್ಕೆ ಅಗತ್ಯವಿರುವ ಸುಧಾರಣಾ ಕ್ರಮಗಳನ್ನು ಈ ಮಸೂದೆ ಹೊಂದಿದೆ ಎಂದು ಮಾಂಡವೀಯ ಹೇಳಿದರು.

ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆಯು, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ದಾರಿಯಾಗಲಿದೆ ಎಂದು ವಿಶ್ವ ಉದ್ದೀಪನದ ಮದ್ದುಸೇವನೆ ತಡೆ ಘಟಕ (ವಾಡಾ) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲವು ಬದಲಾವಣೆಗಳನ್ನು ಇದರಲ್ಲಿ ತರಲಾಗಿದೆ.

2022ರಲ್ಲಿ ಈ ಮಸೂದೆ ಸಿದ್ಧಗೊಂಡಿದ್ದರೂ, ವಾಡಾ ಆಕ್ಷೇಪದ ಕಾರಣ ತಡೆಹಿಡಿಯಲಾಗಿತ್ತು. ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಮಂಡಳಿ ರಚಿಸುವ ಉದ್ದೇಶವನ್ನು ಮೂಲ ಮಸೂದೆ ಹೊಂದಿದ್ದು, ಇದನ್ನು ವಾಡಾ ವಿರೋಧಿಸಿತ್ತು. ಈಗಿನ ಮಸೂದೆಯಲ್ಲಿ ಮಂಡಳಿಯನ್ನು ಉಳಿಸಿಕೊಂಡಿದ್ದರೂ, ಅದು ‘ನಾಡಾ’ ಕಾರ್ಯನಿರ್ವಹಣೆಯ ಅಧಿಕಾರದಲ್ಲಿ ಅಡ್ಡಿಬರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.