ADVERTISEMENT

ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಶವವಿಟ್ಟ ಮತ್ತೊಂದು ಪ್ರಕರಣ ದೆಹಲಿಯಲ್ಲಿ ಬೆಳಕಿಗೆ

ಪಿಟಿಐ
Published 16 ಫೆಬ್ರುವರಿ 2023, 2:27 IST
Last Updated 16 ಫೆಬ್ರುವರಿ 2023, 2:27 IST
.
.   

ನವದೆಹಲಿ: ನೈರುತ್ಯ ದೆಹಲಿಯಲ್ಲಿ ತನ್ನ ಸಹಜೀವನದ ಸಂಗಾತಿಯನ್ನು ಕೊಂದು, ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟ ಆರೋಪಿ ಸಾಹಿಲ್‌ ಗೆಹಲೋತ್‌ (24) ಎಂಬಾತನನ್ನು ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿ ದೆಹಲಿ ನ್ಯಾಯಾಲಯ ಬುಧವಾರ ಆದೇಶಿಸಿದೆ.

‘ಸಾಹಿಲ್‌ ಗೆಹಲೋತ್ ದೆಹಲಿಯ ಮಿತ್ರಾಂವ್ ಗ್ರಾಮದ ನಿವಾಸಿಯಾಗಿದ್ದು, ತನ್ನ ಗೆಳತಿ ನಿಕ್ಕಿ ಯಾದವ್‌ ಅವರನ್ನು ಕೊಂದು, ಶವವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೆ ಕೃತ್ಯ ಎಸಗಿದ ದಿನವೇ ಆತ ಮತ್ತೊಬ್ಬರೊಂದಿಗೆ ಮದುವೆಯಾಗಲು ಹೊರಟಿದ್ದ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಹೆಚ್ಚಿನ ವಿಚಾರಣೆಗೆ ಒಳಪಡಿಸಲು, ಕೊಲೆಯ ನಿಖರ ಸ್ಥಳ ಹಾಗೂ ಕೊಲೆಯ ಬಳಿಕ ಆತ ಅನುಸರಿಸಿದ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ಐದು ದಿನಗಳವರೆಗೆ ದೆಹಲಿಯ ಅಪರಾಧ ವಿಭಾಗದ ಪೊಲೀಸರ ವಶಕ್ಕೆ ಒಪ್ಪಿಸಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅರ್ಚನಾ ಬೇನಿವಾಲ್‌ ಆದೇಶಿಸಿದರು.

ADVERTISEMENT

‘ಆರೋಪಿಯು ತನ್ನ ಸಂಗಾತಿಯ ಜೊತೆಗೆ ಹೋದ ಸ್ಥಳಗಳನ್ನು ಪರಿಶೀಲಿಸಬೇಕಿದೆ. ಅಲ್ಲದೆ ಅಪರಾಧಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿದೆ. ಅದಕ್ಕಾಗಿ ಆರೋಪಿಯನ್ನು ಪೊಲೀಸ್‌ ವಶಕ್ಕೆ ಒಪ್ಪಿಸುವಂತೆ’ ಪೊಲೀಸರು ಅರ್ಜಿಯಲ್ಲಿ ಕೋರಿದ್ದರು.

ಈ ಘಟನೆ ನಡೆದಿರುವ ವಿಷಯ ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ಗೊತ್ತಾಗಿದೆ. ಆರೋಪಿ ನೀಡಿದ ಸುಳಿವುಗಳ ಆಧಾರದ ಮೇಲೆ, 23 ವರ್ಷದ ನಿಕ್ಕಿ ಯಾದವ್‌ ಶವವನ್ನು ಪೊಲೀಸರು ಮಂಗಳವಾರ ಹೊರತೆಗೆದಿದ್ದರು.

‘ಸಾಹಿಲ್‌ ಮತ್ತು ನಿಕ್ಕಿ ಯಾದವ್‌ ಕೆಲ ವರ್ಷಗಳಿಂದ ಸಹಜೀವನ ನಡೆಸುತ್ತಿದ್ದರು. ಸಾಹಿಲ್‌ ಅನ್ನು ವಿವಾಹವಾಗಲು ನಿಕ್ಕಿ ಬಯಸಿದ್ದಳು. ಆದರೆ ಆರೋಪಿ, ತಾನು ಬೇರೊಬ್ಬ ಮಹಿಳೆಯ ಜತೆಗೆ ವಿವಾಹವಾಗುವ ವಿಷಯವನ್ನು ನಿಕ್ಕಿಯಿಂದ ಮುಚ್ಚಿಟ್ಟಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರುವರಿ 9ರ ಮಧ್ಯರಾತ್ರಿ ಕೊಲೆ: ‘ಸಾಹಿಲ್‌ ನಿಶ್ಚಿತಾರ್ಥ ಮತ್ತು ವಿವಾಹವಾಗುವ ವಿಷಯ ತಿಳಿದ ನಿಕ್ಕಿ, ಆತನನ್ನು ಫೆಬ್ರುವರಿ 9ರಂದು ಉತ್ತಮ್‌ ನಗರದಲ್ಲಿರುವ ತನ್ನ ಮನೆಗೆ ಬರುವಂತೆ ಕರೆ ಮಾಡಿ ಹೇಳಿದ್ದಾಳೆ. ಗೆಳತಿಯ ಮನೆಗೆ ಹೋದ ಆರೋಪಿಯು ತನ್ನ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಈ ವೇಳೆ, ಬೇರೊಬ್ಬರೊಂದಿಗೆ ವಿವಾಹವಾಗದಂತೆ ನಿಕ್ಕಿಯು ಸಾಹಿಲ್‌ ಮೇಲೆ ಒತ್ತಡ ಹೇರಿದ್ದಾಳೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಚಿಂಗ್‌ ಸಂದರ್ಭದಲ್ಲಿ ಪರಿಚಯ: ಎಸ್‌ಎಸ್‌ಸಿ ಪರೀಕ್ಷೆ ತಯಾರಿಗಾಗಿ ತಾನು 2018ರ ಜನವರಿಯಲ್ಲಿ ಉತ್ತಮ್‌ ನಗರದ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದೆ. ಹರಿಯಾಣದ ಜಜ್ಜರ್‌ನ ನಿವಾಸಿ ನಿಕ್ಕಿ ಯಾದವ್‌ ಅವರೂ ಉತ್ತಮ್‌ ನಗರದ ಸಂಸ್ಥೆಯಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು ಎಂದು ಸಾಹಿಲ್‌ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.