ADVERTISEMENT

ಮಹಿಳೆಯರ ಕುರಿತು ವಿವಾದಿತ ಹೇಳಿಕೆ: ಬಾಬಾ ರಾಮದೇವ್‌ಗೆ ನೋಟಿಸ್‌

ಮಹಿಳೆಯರು ಬಟ್ಟೆಯನ್ನೇ ಧರಿಸದಿದ್ದರೂ ಅಂದವಾಗಿ ಕಾಣುತ್ತಾರೆ ಎಂದಿದ್ದ ಬಾಬಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2022, 10:35 IST
Last Updated 27 ನವೆಂಬರ್ 2022, 10:35 IST
   

ಮುಂಬೈ: ಮಹಿಳೆಯರು ಬಟ್ಟೆಯನ್ನೇ ಧರಿಸದಿದ್ದರೂ ಅಂದವಾಗಿ ಕಾಣುತ್ತಾರೆ ಎಂಬ ಯೋಗ ಗುರು ಬಾಬಾ ರಾಮದೇವ್‌ ಹೇಳಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದೆ.‌


ಶುಕ್ರವಾರ ಥಾಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮದೇವ್‌, ‘ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್‌ನಲ್ಲಿ ಕೂಡ ಮತ್ತು ನನ್ನ ಕಣ್ಣಿನಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ’ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಮಹಿಳೆಯರ ಕುರಿತಾಗಿನ ಈ ವಿವಾದಿತ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಆಯೋಗ ಕೇಳಿದ್ದು, ಉತ್ತರಿಸಲು ಮೂರು ದಿನಗಳ ಕಾಲಾವಕಾಶ ನೀಡಿದೆ.


ಬಾಬಾ ರಾಮದೇವ್‌ ಮಾತನಾಡಿರುವ ವಿಡಿಯೊ ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪತ್ನಿ ಅಮೃತಾ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ಪುತ್ರ ಹಾಗೂ ಸಂಸದ ಶ್ರೀಕಾಂತ್‌ ಶಿಂದೆ ಕೂಡ ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದರು.

ADVERTISEMENT


ವೇದಿಕೆಯಲ್ಲಿದ್ದ ಅಮೃತಾ ಫಡಣವೀಸ್‌ ಏಕೆ ಹೇಳಿಕೆಯನ್ನು ವಿರೋಧಿಸಲಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಪ್ರಶ್ನಿಸಿದ್ದಾರೆ. ಟಿಎಂಸಿ ಸಂಸದೆ ಮೋಹಿತ್ರಾ ಪ್ರತಿಕ್ರಿಯಿಸಿ, ಪತಂಜಲಿ ಬಾಬಾ ಏಕೆ ರಾಮಲೀಲಾ ಮೈದಾನದಿಂದ ಮಹಿಳೆಯ ಬಟ್ಟೆಯಲ್ಲಿ ಓಡಿಹೋಗಿದ್ದರು ಎಂಬುದು ನನಗೆ ಈಗ ಗೊತ್ತಾಗಿದೆ. ಅವರು ಸೀರೆ, ಸಲ್ವಾರ್‌ ಮತ್ತು...ಇಷ್ಟಪಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.