ಬೆಂಗಳೂರು: ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನರುಜ್ಜೀವನಗೊಳಿಸಲು ಕೇಂದ್ರ ಉಕ್ಕು ಸಚಿವಾಲಯವು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ.
ಕಾಲಮಿತಿಯೊಳಗೆ ಉಕ್ಕು ಕಾರ್ಖಾನೆ ಪುನರುಜ್ಜೀವನಗೊಳಿಸಲು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಬುಧವಾರ ಇಲ್ಲಿ ಸಭೆ ನಡೆಸಿದರು. ಕಾರ್ಖಾನೆಯನ್ನು ಹಂತ ಹಂತವಾಗಿ ಆಧುನೀಕರಣಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಕಾರ್ಖಾನೆಗೆ ಹೊಸ ರೂಪ ನೀಡಲು ₹15 ಸಾವಿರ ಕೋಟಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಯು (ವಿಐಎಸ್‌ಎಲ್) ಸಂಡೂರಿನ ರಾಮಗಢ ಅರಣ್ಯ ವಲಯದಲ್ಲಿ ಗಣಿ ಪಡೆಯಲು ಪ್ರಯತ್ನ ನಡೆಸಿದೆ. ಒಂದು ವೇಳೆ ಈ ಗಣಿ ಲಭ್ಯವಾಗದಿದ್ದರೆ ಜಾರ್ಖಂಡ್ ಅಥವಾ ಛತ್ತೀಸಗಢದಿಂದ ಎನ್‌ಎಂಡಿಸಿಯ ಅದಿರು ಪಡೆಯುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.
ವಿಸ್ತೃತ ಯೋಜನಾ ವರದಿಯನ್ನು ನೀತಿ ಆಯೋಗ ಪರಿಶೀಲನೆ ನಡೆಸಲಿದೆ. ಬಳಿಕ ಪ್ರಧಾನಿ ಸಚಿವಾಲಯ ಪರಾಮರ್ಶೆ ನಡೆಸಲಿದೆ. ಆ ನಂತರ, ಕಾರ್ಖಾನೆಯ ಪುನರುಜ್ಜೀವನದ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಸಿಗಬೇಕಿದೆ.
ವಿಐಎಸ್‌ಎಲ್ ಖಾಸಗೀಕರಣ ಮಾಡಲು ಕೇಂದ್ರ ಸಚಿವ ಸಂಪುಟವು 2016ರಲ್ಲಿ ಅನುಮೋದನೆ ನೀಡಿತ್ತು. ಸಂಸ್ಥೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ಈ ಹಿಂದೆ ಬಿಡ್ ಆಹ್ವಾನಿಸಿತ್ತು. ಬಿಡ್‌ದಾರರು ಆಸಕ್ತಿ ವಹಿಸದ ಕಾರಣಕ್ಕೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ 2022ರ ನವೆಂಬರ್‌ನಲ್ಲಿ ಕೈಬಿಟ್ಟಿತ್ತು. ನಂತರ ಸರ್ಕಾರವು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಆರಂಭಿಸಿತ್ತು. ಕೇಂದ್ರ ಉಕ್ಕು ಸಚಿವವಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕುಮಾರಸ್ವಾಮಿ, ಸಂಸ್ಥೆಯ ಪುನರುಜ್ಜೀವನದ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ವರ್ಷಾಂತ್ಯದೊಳಗೆ ಕಾರ್ಖಾನೆಯ ಪುನರುಜ್ಜೀವನಕ್ಕೆ ಪ‍್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಲಿದ್ದಾರೆ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.