ADVERTISEMENT

ಏರ್‌ ಇಂಡಿಯಾ ವಿಮಾನ ದುರಂತ | ಬ್ಲ್ಯಾಕ್‌ಬಾಕ್ಸ್ ವಿಶ್ಲೇಷಣೆ: ಶೀಘ್ರ ನಿರ್ಧಾರ

ಪಿಟಿಐ
Published 19 ಜೂನ್ 2025, 16:28 IST
Last Updated 19 ಜೂನ್ 2025, 16:28 IST
ಏರ್‌ ಇಂಡಿಯಾ ವಿಮಾನ ದುರಂತ
ಏರ್‌ ಇಂಡಿಯಾ ವಿಮಾನ ದುರಂತ   

ನವದೆಹಲಿ: ಏರ್‌ ಇಂಡಿಯಾ ವಿಮಾನ ದುರಂತದ ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಸಂಸ್ಥೆಯು (ಎಎಐಬಿ) ವಿಮಾನದ ಬ್ಲ್ಯಾಕ್‌ಬಾಕ್ಸ್‌ಗಳನ್ನು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೆ ಎಂಬುದನ್ನು ಇನ್ನಷ್ಟು ಮೌಲ್ಯಮಾಪನದ ಬಳಿಕ ನಿರ್ಧರಿಸಲಿದೆ.

‘ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳ ಸಂಪೂರ್ಣ ಬೆಂಬಲದೊಂದಿಗೆ ಎಎಐಬಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಸ್ಥಳ ಪರಿಶೀಲನೆ ಮತ್ತು ಸಾಕ್ಷ್ಯ ಸಂಗ್ರಹ ಸೇರಿದಂತೆ ಪ್ರಮುಖ ಕೆಲಸಗಳು ಪೂರ್ಣಗೊಂಡಿದ್ದು, ಈಗ ಹೆಚ್ಚಿನ ವಿಶ್ಲೇಷಣೆ ನಡೆಯುತ್ತಿದೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ಬ್ಲ್ಯಾಕ್‌ಬಾಕ್ಸ್‌ಗಳನ್ನು ವಿಶ್ಲೇಷಣೆಗಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂಬ ವರದಿಗಳನ್ನು ಉಲ್ಲೇಖಿಸಿ, ‘ಎಲ್ಲಾ ತಾಂತ್ರಿಕ, ಸುರಕ್ಷತಾ ಮತ್ತು ಭದ್ರತೆಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಮೌಲ್ಯಮಾಪನದ ನಂತರ ಬ್ಲ್ಯಾಕ್‌ಬಾಕ್ಸ್‌ಗಳ ವಿಶ್ಲೇಷಣೆ ಎಲ್ಲಿ ಮಾಡಬೇಕು ಎಂಬ ನಿರ್ಧಾರವನ್ನು ಎಎಐಬಿ ತೆಗೆದುಕೊಳ್ಳುತ್ತದೆ’ ಎಂದಿದೆ. ಇಂತಹ ‘ಸೂಕ್ಷ್ಮ’ ವಿಷಯಕ್ಕೆ ಸಂಬಂಧಿಸಿದಂತೆ ಊಹಾಪೋಹಗಳಿಂದ ದೂರವಿರುವಂತೆ ಸಂಬಂಧಪಟ್ಟ ಭಾಗೀದಾರರಿಗೆ ಮನವಿ ಮಾಡಿದೆ.

ADVERTISEMENT

‘ಜೂನ್‌ 12ರ ವಿಮಾನ ದುರಂತದ ತನಿಖೆ ಸುಗಮವಾಗಿ ನಡೆಯುತ್ತಿದ್ದು, ಎರಡೂ ಬ್ಲ್ಯಾಕ್‌ಬಾಕ್ಸ್‌ಗಳು ಎಎಐಬಿ ಅಧಿಕಾರಿಗಳ ವಶದಲ್ಲಿವೆ’ ಎಂದು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಗುರುವಾರ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.