ADVERTISEMENT

ಕೀವ್‌: ರೈಲ್ವೆ ನಿಲ್ದಾಣಕ್ಕೆ ತೆರಳಲು ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

ಪಿಟಿಐ
Published 28 ಫೆಬ್ರುವರಿ 2022, 9:35 IST
Last Updated 28 ಫೆಬ್ರುವರಿ 2022, 9:35 IST
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣ ಮುಂದುವರಿದಂತೆ ಪೊಲೀಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಕಾರಿನಿಂದ ಇಳಿಸಿ ಪರಿಶೀಲಿಸುತ್ತಿದ್ದಾರೆ. (ಚಿತ್ರ-ರಾಯಿಟರ್ಸ್)
ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣ ಮುಂದುವರಿದಂತೆ ಪೊಲೀಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಕಾರಿನಿಂದ ಇಳಿಸಿ ಪರಿಶೀಲಿಸುತ್ತಿದ್ದಾರೆ. (ಚಿತ್ರ-ರಾಯಿಟರ್ಸ್)   

ನವದೆಹಲಿ: ಉಕ್ರೇನ್ ರಾಜಧಾನಿ ಕೀವ್‌‌ನಲ್ಲಿ ಸಿಲುಕಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳು ಯುದ್ಧಪೀಡಿತ ದೇಶದಿಂದ ತಮ್ಮ ಮುಂದಿನ ಪ್ರಯಾಣ ಕೈಗೊಳ್ಳಲು ರೈಲ್ವೇ ನಿಲ್ದಾಣಕ್ಕೆ ತೆರಳಬೇಕು ಎಂದು ಉಕ್ರೇನ್‌ನ ಭಾರತೀಯ ರಾಯಭಾರಿ ಕಚೇರಿ ಸೋಮವಾರ ತಿಳಿಸಿದೆ.

ಕೀವ್ ನಗರದಲ್ಲಿ ವೀಕೆಂಡ್ ಕರ್ಫ್ಯೂವನ್ನು ಹಿಂತೆಗೆಯಲಾಗಿದ್ದು, ಅಲ್ಲಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳು ನರಗದ ರೈಲು ನಿಲ್ದಾಣಕ್ಕೆ ತೆರಳಬೇಕು. ಸ್ಥಳಾಂತರಕ್ಕಾಗಿ ಉಕ್ರೇನ್ ರೈಲ್ವೆ ವಿಶೇಷ ರೈಲುಗಳನ್ನು ನಿಗದಿ ಮಾಡಿದ್ದು, ತಮ್ಮ ಮುಂದಿನ ಪ್ರಯಾಣವನ್ನು ಆ ಮೂಲಕ ಪ್ರಾರಂಭಿಸಬಹುದು ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಆರನೇ ವಿಮಾನವು 240 ಭಾರತೀಯರನ್ನು ಕರೆದುಕೊಂಡು ಬುಡಾಪೆಸ್ಟ್‌ನಿಂದ ಹೊರಟಿದೆ. ಇದರೊಂದಿಗೆ ಸ್ಥಳಾಂತರ ಪ್ರಕ್ರಿಯೆಗಳು ಚುರುಕುಗೊಂಡಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷ ವರ್ದನ್ ಶ್ರಿಂಗ್ಲಾ ಭಾನುವಾರ ಮಾತನಾಡಿ, 'ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್‌ನಲ್ಲಿರುವ ನಾಗರಿಕರನ್ನು ಭಾರತಕ್ಕೆ ಕರೆತರಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಕೀವ್ ನಗರವೊಂದರಲ್ಲೇ ಸುಮಾರು 2 ಸಾವಿರ ಭಾರತೀಯರು ಇದ್ದು, ಕಳೆದ ಕೆಲವು ದಿನಗಳಿಂದ 2 ಸಾವಿರಕ್ಕೂ ಅಧಿಕ ಜನರನ್ನು ಕರೆತರಲಾಗಿದೆ' ಎಂದು ತಿಳಿಸಿದ್ದರು.

ADVERTISEMENT

ಫೆ. 24ರಿಂದ ರಷ್ಯಾ ನಡೆಸುತ್ತಿರುವ ಆಕ್ರಮಣದಿಂದಾಗಿ ಉಕ್ರೇನ್‌ ದೇಶದಲ್ಲಿ 14 ಮಕ್ಕಳು ಸೇರಿದಂತೆ ಒಟ್ಟು 352 ನಾಗರಿಕರು ಇದುವರೆಗೆ ಮೃತಪಟ್ಟಿದ್ದಾರೆ. 116 ಮಕ್ಕಳು ಮತ್ತು 1,684 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.