ADVERTISEMENT

ಮಧುಮೇಹದ ಜಾಗೃತಿ ಮೂಡಿಸುವ ಫಲಕ ಸ್ಥಾಪಿಸಿ: ಶಾಲೆಗಳಿಗೆ ಸಿಬಿಎಸ್‌ಇ

ಪಿಟಿಐ
Published 17 ಮೇ 2025, 11:23 IST
Last Updated 17 ಮೇ 2025, 11:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನವದೆಹಲಿ: ‘ಮಕ್ಕಳು ಸೇವಿಸುವ ಸಕ್ಕರೆ ಪ್ರಮಾಣದ ಮೇಲೆ ನಿಗಾ ಇರಿಸಿ, ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವಂತೆ ಜಾಗೃತಿ ಮೂಡಿಸಲು ಸಕ್ಕರೆ ಅಂಶದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಸ್ಥಾಪಿಸಬೇಕು’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತನ್ನೆಲ್ಲಾ ಶಾಲೆಗಳಿಗೆ ಸೂಚಿಸಿದೆ.

‘ಟೈಪ್‌ 2 ಮಧುಮೇಹವು ಸಾಮಾನ್ಯವಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಕಳೆದ ದಶಕದಿಂದ ಈ ವಿಧದ ಮಧುವೇಹವು ಸಣ್ಣ ಮಕ್ಕಳಲ್ಲಿ ಗಣನೀಯ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಈ ಕಾರಣಕ್ಕಾಗಿ ಸಕ್ಕರೆ ಅಂಶದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಸ್ಥಾಪಿಸಬೇಕು’ ಎಂದು ಮೇ 14ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸಿಬಿಎಸ್‌ಇ ಹೇಳಿದೆ.

ADVERTISEMENT

‘ಸಕ್ಕರೆ ಅಂಶ ಅಧಿಕವಿರುವ ಆಹಾರ ಪದಾರ್ಥಗಳು ಶಾಲೆಗಳ ಸುತ್ತಮುತ್ತ ಮಕ್ಕಳಿಗೆ ಅನಾಯಾಸವಾಗಿ ದೊರಕುತ್ತಿದೆ. ಅಧಿಕ ಸಕ್ಕರೆ ಅಂಶವಿರುವ ತಂಪು ಪಾನೀಯಗಳೂ ಸುಲಭದಲ್ಲಿ ಸಿಗುತ್ತಿವೆ. ಈ ಎಲ್ಲ ಕಾರಣದಿಂದಾಗಿ ಮಕ್ಕಳು ಸಕ್ಕರೆ ಅಂಶವಿರುವ ಆಹಾರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ’ ಎಂದು ಸಿಬಿಎಸ್‌ಇ ಅಭಿಪ್ರಾಯಪಟ್ಟಿದೆ.

‘ಇಂಥ ಆಹಾರಗಳ ಅಧಿಕ ಸೇವನೆಯಿಂದ ಮಧುಮೇಹ ಮಾತ್ರವಲ್ಲ ಸ್ಥೂಲಕಾಯ, ಹಲ್ಲುಗಳ ಸಮಸ್ಯೆ, ಪಚನಕ್ರಿಯೆಯಲ್ಲಿ ತೊಂದರೆ ಸೇರಿದಂತೆ ಹಲವು ಗಂಭೀರ ಸ್ವರೂಪದ ಕಾಯಿಲೆಗಳನ್ನು ಮಕ್ಕಳನ್ನು ಬಾಧಿಸುತ್ತಿವೆ. ಇದು ಮಕ್ಕಳ ಆರೋಗ್ಯದ ಮೇಲೆ ಮತ್ತು ಅವರ ಶೈಕ್ಷಣಿಕ ಪ್ರಗತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರಲಿದೆ’ ಎಂದಿದೆ.

4 ರಿಂದ10 ವರ್ಷ ವಯಸ್ಸಿನ ಮಕ್ಕಳ ದೈನಂದಿನ ಸಕ್ಕರೆ ಸೇವನೆಯ ಕ್ಯಾಲೊರಿ ಶೇ 13ರಷ್ಟು ಮತ್ತು 11 ರಿಂದ 18 ವರ್ಷ ವಯಸ್ಸಿನ ಮಕ್ಕಳ ಸಕ್ಕರೆ ಸೇವನೆ ಕ್ಯಾಲೊರಿ ಸೇವನೆ ಶೇ15ರಷ್ಟು ಇದೆ ಎಂದು ಅಧ್ಯಯನಗಳು ತಿಳಿಸಿವೆ, ಇದು ಶಿಫಾರಸು ಮಾಡಲಾದ ಶೇಕಡ 5ರಷ್ಟು ಹೆಚ್ಚಾಗಿದೆ ಎಂದು ಮಂಡಳಿ ಕಳವಳ ವ್ಯಕ್ತಪಡಿಸಿದೆ.

ಶಾಲೆ ಹಂತದಲ್ಲಿ ಸಕ್ಕರೆ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿ ನೀಡುವ ಫಲಕಗಳನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲು ಸಿಬಿಎಸ್‌ಇ ಹೇಳಿದೆ.

ಮಂಡಳಿಗಳು ಶಿಫಾರಸು ಮಾಡಲಾದ ದೈನಂದಿನ ಸಕ್ಕರೆ ಸೇವನೆ ಸಂಬಂಧಿಸಿದಂತೆ ಸೇವಿಸುವ ಆಹಾರಗಳಲ್ಲಿನ ಸಕ್ಕರೆ ಅಂಶ (ಜಂಕ್ ಫುಡ್, ತಂಪು ಪಾನೀಯಗಳು, ಇತ್ಯಾದಿಗಳಂತಹ ಅನಾರೋಗ್ಯಕರ ಊಟಗಳು), ಹೆಚ್ಚಿನ ಸಕ್ಕರೆ ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳು ಮತ್ತು ಆರೋಗ್ಯಕರ ಆಹಾರ ಪರ್ಯಾಯಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಎಂದು ಸಿಬಿಎಸ್‌ಇ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.