ಫರಿದಾಬಾದ್(ಹರಿಯಾಣ): ಬಿಹಾರ ಮೂಲದ ವ್ಯಕ್ತಿಯೊಬ್ಬರು ತನ್ನ ನಾಲ್ವರು ಗಂಡು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಂಗಳವಾರ ಫರಿದಾಬಾದ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮನೋಜ್ ಮಹಾತೊ(45) ಮತ್ತು ಮಕ್ಕಳನ್ನು ಪವನ್ (10), ಕರು (9), ಮುರಳಿ (5) ಮತ್ತು ಚೋಟು (3) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಂಪತ್ಯ ದ್ರೋಹದ ವಿಚಾರವಾಗಿ ದಂಪತಿಗಳಲ್ಲಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ ಸಮೀಪದ ಉದ್ಯಾನಕ್ಕೆ ಹೋಗುವುದಾಗಿ ಹೇಳಿ ಮನೋಜ್ ನಾಲ್ವರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಉದ್ಯಾನದ ಬದಲು ರೈಲ್ವೆ ಹಳಿ ಬಳಿಗೆ ಹೋಗಿದ್ದರು. ದಾರಿಯಲ್ಲಿ ಮಕ್ಕಳಿಗೆ ಚಿಪ್ಸ್, ತಂಪು ಪಾನೀಯಗಳನ್ನು ಖರೀದಿಸಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಫ್ಲೈಓವರ್ ಅಡಿಯಲ್ಲಿ ರೈಲು ಬರುವುದನ್ನೆ ಕಾಯುತ್ತಿದ್ದ ಮನೋಜ್, ರೈಲು ಬಂದ ತಕ್ಷಣ ನಾಲ್ವರು ಮಕ್ಕಳನ್ನು ಹಿಡಿದು ಹಳಿ ಮೇಲೆ ನಿಂತಿದ್ದಾರೆ. ಈ ವೇಳೆ ಮಕ್ಕಳು ಕಿರುಚಾಡಿದ್ದು, ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಮಕ್ಕಳ ಕಿರುಚಾಟ ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿಯೇ ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್ ರೈಲು ಐವರ ಮೇಲೆ ಹರಿದಿದೆ.
ಗಂಡ ಮತ್ತು ಮಕ್ಕಳ ಶವಗಳನ್ನು ಕಂಡು ಪತ್ನಿ ಪಜ್ಞೆ ತಪ್ಪಿ ಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.