
ಸುನಿತಾ ವಿಲಿಯಮ್ಸ್
ಕೃಪೆ: ಪಿಟಿಐ
ನವದೆಹಲಿ: ‘ನಾನು ಕೈಗೊಂಡಿರುವ ಅಂತರಿಕ್ಷ ಯಾನಗಳು ಬದುಕಿನ ಕುರಿತ ನನ್ನ ದೃಷ್ಟಿಕೋನವನ್ನೇ ಬದಲಾಯಿಸಿವೆ’ ಎಂದು ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹೇಳಿದ್ದಾರೆ.
‘ಭೂಮಿಯನ್ನು ಒಂದು ಗ್ರಹವಾಗಿ ನಾವು ಬಾಹ್ಯಾಕಾಶದಿಂದ ನೋಡಿದಾಗ, ವಿವಿಧ ವಿಚಾರಗಳ ಕುರಿತು ಮನುಷ್ಯರು ವಾದ ಮಾಡುವುದು ಅಥವಾ ಭಿನ್ನಾಭಿಪ್ರಾಯಗಳನ್ನು ಹೊಂದಿರುವುದು ಕ್ಷುಲ್ಲಕ ಎನಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.
ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಅವರು, ಇಲ್ಲಿನ ಅಮೆರಿಕನ್ ಸೆಂಟರ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
‘ನಾನು ವಿವಾಹಿತೆ. ಪತಿ ಮತ್ತು ನನ್ನ ನಡುವೆ ವಾಗ್ವಾದ ನಡೆಯುತ್ತಿರುತ್ತವೆ. ಇದು ವಾಸ್ತವ ಕೂಡ. ಆದರೆ, ಬಾಹ್ಯಾಕಾಶಕ್ಕೆ ಹೋಗಿ ಭೂಮಿಯತ್ತ ಒಮ್ಮೆ ದೃಷ್ಟಿಹಾಯಿಸಿ ಯೋಚಿಸಿದಾಗ ಈ ವಾಗ್ವಾದ ನಡೆಸುವುದೆಲ್ಲಾ ಕ್ಷುಲ್ಲಕ ಎನಿಸುತ್ತದೆ’ ಎಂದು ಸುನಿತಾ ವಿಲಿಯಮ್ಸ್ ಹೇಳಿದ್ದಾರೆ.
‘ಬಾಹ್ಯಾಕಾಶಕ್ಕೆ ಹೋದಾಗ ನಮ್ಮ ಚಿತ್ತ ನಮ್ಮ ಮನೆಯತ್ತಲೇ ಇರುತ್ತದೆ. ನನ್ನ ತಂದೆ ಭಾರತದವರು ಹಾಗೂ ತಾಯಿ ಸ್ಲೊವೇನಿಯಾದವರು. ಹೀಗಾಗಿ ಈ ಎರಡು ದೇಶಗಳನ್ನು ನಾನು ನನ್ನ ಮನೆ ಎಂದೇ ಕರೆಯುತ್ತೇನೆ. ಬಹುಶಃ ಪ್ರತಿಯೊಬ್ಬರು ಇದನ್ನೇ ಮಾಡುತ್ತಾರೆ ಎಂಬುದು ನನ್ನ ಅನಿಸಿಕೆ’.
‘ಆದರೆ, ಬಾಹ್ಯಾಕಾಶ ತಲುಪಿದ ಕೆಲ ಹೊತ್ತಿನ ನಂತರ ನಮ್ಮ ದೃಷ್ಟಿಕೋನ ವಿಶಾಲವಾಗುತ್ತಾ ಹೋಗುತ್ತದೆ. ಒಂದು ನಿರ್ದಿಷ್ಟ ಮನೆ ಬದಲಾಗಿ ಇಡೀ ಭೂಮಿಯೇ ನಮ್ಮ ಮನೆ ಎಂಬ ಅರಿವು ಮೂಡತೊಡಗುತ್ತದೆ’ ಎನ್ನುವ ಮೂಲಕ ತಮ್ಮ ಬಾಹ್ಯಾಕಾಶ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ಕೈಗೊಂಡಿದ್ದ ಯಾತ್ರೆ ಕುರಿತು ಕೂಡ ಅವರು ಮಾತನಾಡಿದ್ದಾರೆ.
ಎಂಟು ದಿನಗಳ ಮಟ್ಟಿಗೆ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಅವರನ್ನು ಒಳಗೊಂಡ ತಂಡವು, ಗಗನನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಒಂಬತ್ತು ತಿಂಗಳು ಅಲ್ಲಿಯೇ ಇರಬೇಕಾಯಿತು.
ಈ ಕುರಿತು ಮಾತನಾಡಿದ ಅವರು,‘ಬಾಹ್ಯಾಕಾಶ ಯಾನವು ಒಂದು ತಂಡವಾಗಿ ಆಡಬೇಕಾದ ಆಟದಂತೆ. ಇಂತಹ ಅಂತರಿಕ್ಷ ಕಾರ್ಯಕ್ರಮದಲ್ಲಿ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.
ನಮ್ಮ ಭೂಮಿ ಒಂದು ಜೀವಂತ ಆಕಾಶಕಾಯ. ಪೃಥ್ವಿ ಕೇವಲ ಕಲ್ಲುಬಂಡೆಗಳಿಂದ ಕೂಡಿದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಅದು ಚಲನಶೀಲ. ಇಲ್ಲಿನ ಋತುಗಳಲ್ಲಿ, ಬಣ್ಣಬಣ್ಣದ ಪಾಚಿಗಳಿಂದಾಗಿ ಸಾಗರದಲ್ಲಿ ಕಂಡುಬರುವ ಬದಲಾವಣೆಗಳನ್ನು ನಾನು ಅಂತರಿಕ್ಷದಿಂದ ನೋಡಿರುವೆ. ಉತ್ತರ ಗೋಳಾರ್ಧ ಅಥವಾ ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಹಿಮಗಡ್ಡೆಗಳು ರೂಪುಗೊಳ್ಳುವುದನ್ನೂ ಕಣ್ತುಂಬಿಕೊಂಡಿರುವೆ.–ಸುನಿತಾ ವಿಲಿಯಮ್ಸ್
ನಾಸಾದಿಂದ ನಿವೃತ್ತಿ
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿಯಾಗಿದ್ದಾರೆ.
27 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ, ಅವರು ಮೂರು ಬಾರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ಪಯಣಿಸಿದ್ದಾರೆ. ಜೊತೆಗೆ ಹಲವು ಬಾಹ್ಯಾಕಾಶ ಯಾನಗಳನ್ನು ಕೂಡ ಯಶಸ್ವಿಯಾಗಿ ಪೂರೈಸಿ ಗಮನ ಸೆಳೆದಿದ್ದಾರೆ.
ಅವರ ತಂದೆ ದೀಪಕ್ ಪಾಂಡ್ಯ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಝಲಾಸನ್‌ದವರು. ತಾಯಿ ಸ್ಲೋವೆನಿಯಾದವರಾದ ಉರ್ಸುಲಿನ್ ಬಾನಿ.
‘ಸುನಿತಾ ವಿಲಿಯಮ್ಸ್ ಮಾನವಸಹಿತ ಗಗನಯಾನದ ಪ್ರವರ್ತಕರೊಬ್ಬರಲ್ಲಾಗಿದ್ದಾರೆ. ಐಎಸ್‌ಎಸ್‌ಗೆ ಕೈಗೊಂಡ ಯಾನ ಹಾಗೂ ನಾಯಕತ್ವದ ಮೂಲಕ ಬಾಹ್ಯಾಕಾಶ ಅನ್ವೇಷಣೆ ಕ್ಷೇತ್ರದ ಭವಿಷ್ಯ ರೂಪಿಸಿದ್ದಾರೆ’ ಎಂದು ನಾಸಾ ಆಡಳಿತಾಧಿಕಾರಿ ಜೇರ್ಡ್ ಐಸಾಕ್‌ಮನ್ ಪ್ರಕಟಣೆಯಲ್ಲಿ ಶ್ಲಾಘಿಸಿದ್ದಾರೆ.
ಸಾಧನೆಗಳು
ಸುನಿತಾ ವಿಲಿಯಮ್ಸ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂಬತ್ತು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದಾರೆ. ಒಟ್ಟು 62 ಗಂಟೆ 6 ನಿಮಿಷಗಳ ಅಂತರಿಕ್ಷ ಪಯಣ ನಡೆಸಿ, ಇಂತಹ ಸಾಧನೆ ಮಾಡಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಭೌತವಿಜ್ಞಾನದಲ್ಲಿ ಪದವಿ, ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಬಳಿಕ ಅವರು ಅಮೆರಿಕ ನೌಕಾಪಡೆಗೆ ಸೇರಿದರು. 40 ಬಗೆಯ ಯುದ್ಧವಿಮಾನಗಳನ್ನು 4 ಸಾವಿರಕ್ಕೂ ಅಧಿಕ ಗಂಟೆಗಳಷ್ಟು ಹಾರಾಟ ನಡೆಸಿದ ಅನುಭವವನ್ನೂ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.