ನವದೆಹಲಿ: ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ (ಎಪಿಕ್) ಮತ್ತು ಪಡಿತರ ಚೀಟಿಗಳನ್ನು ಕ್ರಮಬದ್ಧ ದಾಖಲೆಗಳನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ಅಲ್ಲದೇ, ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ‘ವಿಶೇಷವಾದ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಮುಂದುವರಿಸಲೂ ಆಯೋಗಕ್ಕೆ ಅನುಮತಿ ನೀಡಿದೆ. ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ರಾಜ್ಯದ ನಿವಾಸಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದಕ್ಕೆ ಪರಿಗಣಿಸಲಾಗುವ 11 ದಾಖಲೆಗಳ ಪಟ್ಟಿಯನ್ನು ಚುನಾವಣಾ ಆಯೋಗ ಜೂನ್ 24ರಂದು ಪ್ರಕಟಿಸಿತ್ತು. ಈ ಪಟ್ಟಿಯು ಆಧಾರ್ ಕಾರ್ಡ್, ಎಪಿಕ್ ಮತ್ತು ಪಡಿತರಚೀಟಿ ಒಳಗೊಂಡಿರಲಿಲ್ಲ. ಹೀಗಾಗಿ, ಆಧಾರ್, ಎಪಿಕ್ ಹಾಗೂ ಪಡಿತರ ಚೀಟಿಗಳನ್ನು ಪರಿಗಣಿಸದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಜಾಯ್‌ಮಾಲ್ಯಾ ಬಾಗ್ಚಿ ಅವರು ಇದ್ದ ನ್ಯಾಯಪೀಠ, ಈ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿತು. ಈ ವಿಚಾರ ಕುರಿತು ಜುಲೈ 21ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 28ಕ್ಕೆ ಮುಂದೂಡಿತು.
ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ರಾಜಕೀಯ ಪಕ್ಷಗಳ ಮುಖಂಡರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಹಾಗೂ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು. ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ಹಾಜರಿದ್ದರು.
ವಾದ ಆಲಿಸಿದ ನ್ಯಾಯಪೀಠ, ‘ಈ ವಿಚಾರವಾಗಿ ಅರ್ಜಿದಾರರು ಯಾವುದೇ ಮಧ್ಯಂತರ ಪರಿಹಾರ ಕೋರಿಲ್ಲ’ ಎಂದು ಅಭಿಪ್ರಾಯಪಟ್ಟಿತಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆ ಮುಂದುವರಿಸಲು ಅನುಮತಿ ನೀಡಿತು.
ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವುದಕ್ಕೆ ಇರುವ ಅಧಿಕಾರ ಏನು?, ಇದಕ್ಕೆ ಅನುಸರಿಸುವ ವಿಧಾನ ಯಾವುದು? ಹಾಗೂ ಮತದಾರರ ಪಟ್ಟಿಯ ಕರಡು ಸಿದ್ಧಪಡಿಸಿರುವ ಸಮಯ ಕುರಿತಂತೆ ಈಗ ಪ್ರಶ್ನೆಗಳು ಉದ್ಭವಿಸಿವೆ. ಇವುಗಳ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಿದ್ದಾಗಿಯೂ ನ್ಯಾಯಪೀಠ ಹೇಳಿತು.
ವಿಚಾರಣೆ ವೇಳೆ, ‘ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಜಾತಿ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳು ಅಗತ್ಯ. ಆದರೆ, ಈ ಪ್ರಮಾಣಪತ್ರ/ದಾಖಲೆಗಳನ್ನು ಪಡೆಯಲು ಆಧಾರ್ ಕಾರ್ಡ್ ಆಧಾರವಾಗಿದೆಯಲ್ಲ’ ಎಂದು ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
‘ಇತರ ಕಾಯ್ದೆಗಳನ್ನು ನಿರ್ಲಕ್ಷಿಸಿ, ಕೇವಲ ಆಧಾರ್ ಕಾಯ್ದೆಯನ್ನು ಮಾತ್ರ ಉಲ್ಲೇಖಿಸಲು ಆಗದು’ ಎಂದೂ ಹೇಳಿತು.
‘ಅರ್ಹತೆ ಹೊಂದಿರದ ವ್ಯಕ್ತಿ ಮತ ಚಲಾಯಿಸುವಂತಿಲ್ಲ. ಅರ್ಹತೆ ಹೊಂದಿದ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇಬೇಕು ಎಂಬುದು ಚುನಾವಣಾ ಆಯೋಗದ ಹೊಣೆಗಾರಿಕೆ ಅಲ್ಲವೇ’ ಎಂದು ಅರ್ಜಿದಾರರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.
‘ಸಂವಿಧಾನ ನೀಡಿರುವ ಅವಕಾಶದ ಪ್ರಕಾರವೇ ಅವರು (ಚುನಾವಣಾ ಆಯೋಗ) ಪರಿಷ್ಕರಣೆ ಮಾಡುತ್ತಿದ್ದಾರೆ. ಏನು ಮಾಡಬಾರದೋ ಅದನ್ನು ಆಯೋಗವು ಮಾಡುತ್ತಿಲ್ಲ’ ಎಂದೂ ನ್ಯಾಯಪೀಠ ಹೇಳಿತು.
ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವುದಕ್ಕೆ ಪರಿಗಣಿಸಲಾಗುವ ಕ್ರಮಬದ್ಧ ದಾಖಲೆಗಳ ಪಟ್ಟಿ ಕುರಿತು ಚುನಾವಣಾ ಆಯೋಗ ಜೂನ್ 24ರಂದು ಹೊರಡಿಸಿರುವ ಪ್ರಕಟಣೆ ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ಪಿಯುಸಿಎಲ್ ಅರ್ಜಿ ಸಲ್ಲಿಸಿವೆ. ವಿಪಕ್ಷಗಳ ನಾಯಕರಾದ ಮಹುವಾ ಮೊಯಿತ್ರಾ (ಟಿಎಂಸಿ) ಮನೋಜ್ ಕುಮಾರ್ ಝಾ (ಅರ್‌ಜೆಡಿ) ಸುಪ್ರಿಯಾ ಸುಳೆ (ಎನ್‌ಸಿಪಿ–ಎಸ್‌ಪಿ) ಕೆ.ಸಿ.ವೇಣುಗೋಪಾಲ್ (ಕಾಂಗ್ರೆಸ್) ಡಿ.ರಾಜಾ (ಸಿಪಿಐ) ಹರಿಂದರ್ ಮಲಿಕ್ (ಸಮಾಜವಾದಿ ಪಕ್ಷ) ಅರವಿಂದ ಸಾವಂತ್ (ಶಿವಸೇನಾ ಯುಬಿಟಿ) ಸರ್ಫರಾಜ್ ಅಹ್ಮದ್ (ಜೆಎಂಎಂ) ದೀಪಾಂಕರ ಭಟ್ಟಾಚಾರ್ಯ (ಸಿಪಿಐ–ಎಂಎಲ್) ಹಾಗೂ ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಕೂಡ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
* ಬಿಹಾರದಲ್ಲಿ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯು ಸಂವಿಧಾನದ 14 19 21 325 ಹಾಗೂ 326ನೇ ವಿಧಿಗಳ ಉಲ್ಲಂಘನೆಯಾಗಿದೆ
* ಪ್ರಜಾ ಪ್ರಾತಿನಿಧ್ಯ ಕಾಯ್ದೆ–1950ರ ವಿವಿಧ ಅವಕಾಶಗಳು ಹಾಗೂ ಮತದಾರರ ನೋಂದಣಿ ನಿಯಮಗಳು–1960ರ ಉಲ್ಲಂಘನೆಯಾಗಿದೆ
* ‘ವಿಶೇಷವಾದ ತೀವ್ರ ಪರಿಷ್ಕರಣೆ’ ಕುರಿತ ಆದೇಶವನ್ನು ರದ್ದುಪಡಿಸಬೇಕು. ಇಲ್ಲದೇ ಹೋದಲ್ಲಿ ಲಕ್ಷಾಂತರ ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶದಿಂದ ವಂಚಿತಗೊಳ್ಳುತ್ತಾರೆ. ಇದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಡ್ಡಿ ಆಗುತ್ತದೆ
* ಸದ್ಯ ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲಾವಕಾಶ ಕಡಿಮೆ ಇದೆ. ಹೆಸರು ಸೇರ್ಪಡೆಗಾಗಿ ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಒದಗಿಸಲು/ಸಿದ್ಧಪಡಿಸಲು ಸಮರ್ಪಕ ಪ್ರಕ್ರಿಯೆ ಇಲ್ಲ. ಇದರಿಂದ ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯೂ ಇದೆ
* ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋದಲ್ಲಿ ಅದು ಸಮಾನ ಅವಕಾಶ ತತ್ವಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಲಿದೆ
* ಕಾಯ್ದೆ ಪ್ರಕಾರ ಆಧಾರ್ ಕಾರ್ಡ್‌ಅನ್ನು ಪೌರತ್ವ ಅಥವಾ ವಾಸಸ್ಥಳದ ಪುರಾವೆಯಾಗಿ ಪರಿಗಣಿಸಲು ಸಾಧ್ಯ ಇಲ್ಲ
* ಪ್ರತಿಯೊಂದು ದಾಖಲೆಯೂ ಒಂದು ನಿರ್ದಿಷ್ಟ ಉದ್ದೇಶ ಹೊಂದಿದೆ. ಹೆಸರು ಸೇರ್ಪಡೆಗೆ ಸಂಬಂಧಿಸಿ ಅಂದಾಜು 5.5 ಕೋಟಿಯಿಂದ 6 ಕೋಟಿಯಷ್ಟು (ಶೇ 60ರಷ್ಟು) ಅರ್ಜಿ ನಮೂನೆಗಳನ್ನು ಭರ್ತಿ ಮಾಡಲಾಗಿದ್ದು ಈ ಪೈಕಿ ಅರ್ಧದಷ್ಟು ಅರ್ಜಿಗಳಲ್ಲಿನ ಮಾಹಿತಿಗಳನ್ನು ಅಪ್‌ಲೋಡ್ ಮಾಡಲಾಗಿದೆ
* ಕಳೆದ ಬಾರಿ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿತ್ತು. ಈಗ ನಡೆಯುತ್ತಿರುವುದು ವಿಶೇಷವಾದ ತೀವ್ರ ಪರಿಷ್ಕರಣೆ. ಇಂಥ ಪರಿಷ್ಕರಣೆ ಅಗತ್ಯವಿತ್ತು
* ಅಂದಾಜು 1.1 ಕೋಟಿ ಮಂದಿ ಮೃತಪಟ್ಟಿದ್ದಾರೆ ಹಾಗೂ ಅಂದಾಜು 70 ಲಕ್ಷ ಜನರು ವಲಸೆ ಹೋಗಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ. ಹೀಗಾಗಿ ಅರ್ಜಿದಾರರ ಈ ವಾದವೇ ಮತದಾರರ ಪಟ್ಟಿ ಪರಿಷ್ಕರಣೆಗೆ ಆಧಾರವಾಗಲಿದೆ
ಮತದಾರರ ಪಟ್ಟಿ ಪರಿಷ್ಕರಣೆ ‘ಕೃತಕ’ ಅಥವಾ ‘ಕಾಲ್ಪನಿಕ’ ಎಂದು ಹೇಳುವುದನ್ನು ನಿಲ್ಲಿಸಿ. ಈ ಪರಿಷ್ಕರಣೆ ಹಿಂದೆ ಒಂದು ತರ್ಕ ಇದೆ. ಆ ತರ್ಕದ ವಿರುದ್ಧ ನೀವು (ಅರ್ಜಿದಾರರು) ವಾದ ಮಾಡಬಹುದು-ಸುಪ್ರೀಂ ಕೋರ್ಟ್
ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಪರಿಹಾರವಾಗಿದೆ. ಆಯೋಗವು ಸುಪ್ರೀಂ ಕೋರ್ಟ್ ಸಲಹೆಯನ್ನು ಪಾಲಿಸುತ್ತದೆ ಎಂಬ ವಿಶ್ವಾಸ ಇದೆ-ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.