
ಸುಪ್ರೀಂ ಕೋರ್ಟ್
ನವದೆಹಲಿ: ದೋಷಾರೋಪ ನಿಗದಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ. ಕೆಲವೊಂದು ಪ್ರಕರಣಗಳಲ್ಲಿ ದೋಷಾರೋಪ ನಿಗದಿಗೆ ಮೂರರಿಂದ ನಾಲ್ಕು ವರ್ಷ ತಗುಲುತ್ತಿದೆ ಎಂದು ಹೇಳಿದೆ.
ದೋಷಾರೋಪ ಪಟ್ಟಿ ಸಲ್ಲಿಸಿದ ಕೂಡಲೇ ದೋಷಾರೋಪ ನಿಗದಿ ಮಾಡಬೇಕು ಎಂದು ಕೋರ್ಟ್ ಒತ್ತಿ ಹೇಳಿದೆ.
ದೇಶದಾದ್ಯಂತ ಈ ವಿಳಂಬ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್.ವಿ ಅಂಜಾರಿಯಾ ಅವರಿದ್ದ ಪೀಠ ಗಮನಿಸಿತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಪ್ರಕಾರ ಮೊದಲ ವಿಚಾರಣೆ ನಡೆದ 60 ದಿನಗಳಲ್ಲಿ ದೋಷಾರೋಪ ನಿಗದಿ ಮಾಡಬೇಕು.
ದೇಶದಾದ್ಯಂತ ಏಕರೂಪ ನ್ಯಾಯಾಂಗ ಪದ್ಧತಿ ಇರಬೇಕು ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು. ಸಕಾಲಿಕವಾಗಿ ದೋಷಾರೋಪ ನಿಗದಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸುವ ಪಸ್ತಾಒವನ್ನೂ ಕೋರ್ಟ್ ಮುಂದಿಟ್ಟಿತು. ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಸ್ಥಗಿತಕ್ಕೆ ದೋಷಾರೋಪ ನಿಗದಿಯಲ್ಲಾಗುತ್ತಿರುವ ವಿಳಂಬವೇ ಕಾರಣ ಎಂದು ಕೋರ್ಟ್ ಹೇಳಿತು.
ಶಾಸನಬದ್ಧ ನಿಯಮದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ಕೆಲವು ನಿರ್ದೇಶನಗಳನ್ನು ಹೊರಡಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ವಿಷಯದಲ್ಲಿ ಕೋರ್ಟ್‌ಗೆ ಬಿಹಾರ ಸರ್ಕಾರದ ವಕೀಲ ಅವರೊಂದಿಗೆ ಸೇರಿ ಅಮಿಕಸ್ ಕ್ಯೂರಿಯಾಗಿ ಸಹಾಯ ಮಾಡಬೇಕು ಎಂದು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರನ್ನು ಕೋರ್ಟ್ ಕೇಳಿಕೊಂಡಿತು.
ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಅವರ ಬೆಂಬಲವನ್ನೂ ಕೇಳಿದ ಕೋರ್ಟ್, ದೋಷಾರೋಪ ನಿಗದಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ದೇಶದಾದ್ಯಂತ ನಿರ್ದೇಶನ ನೀಡುವ ಬಗ್ಗೆ ಪರಿಗಣಿಸಿ ಎಂದು ಹೇಳಿದೆ.
ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ವೇಳೆ, ಎರಡು ವರ್ಷದಿಂದ ಜೈಲಿನಲ್ಲಿ ಇದ್ದರೂ ಇನ್ನೂ ದೋಷಾರೋಪ ನಿಗದಿ ಮಾಡದಿರುವುದರ ಬಗ್ಗೆ ಆರೋಪಿ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.
ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಹೀಗೆ ಯಾಕೆ ನಿರಂತರವಾಗಿ ವಿಳಂಬವಾಗುತ್ತಿದೆ ಎಂದು ಕೋರ್ಟ್ ಪ್ರಶ್ನಿಸಿತು.
‘ದೇಶದಾದ್ಯಂತ ದೋಷಾರೋಪ ನಿಗದಿ ಮಾಡುವುದಕ್ಕೆ ಮೂರು–ನಾಲ್ಕು ವರ್ಷ ತಗುಲುವುದು ನಮ್ಮ ಗಮನಕ್ಕೆ ಬಂದಿದೆ. ಸೆಕ್ಷನ್ 251 (ಬಿ) ಪ್ರಕಾರ ಮೊದಲ ವಿಚಾರಣೆ ನಡೆದ 60 ದಿನಗಳಲ್ಲಿ ದೋಷಾರೋಪ ನಿಗದಿ ಮಾಡಬೇಕು. ಉದಾಹರಣೆಗೆ ನಾವು ಈಗ ನೋಟಿಸ್ ನೀಡಲು ಆದೇಶಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದಾರೆ. 2023ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರೂ, 2025ರವರೆಗೂ ಆರೋಪ ನಿಗದಿ ಮಾಡಿಲ್ಲ. ಮೂವರೂ ಜೈಲಿನಲ್ಲಿದ್ದಾರೆ‘ ಎಂದು ಕೋರ್ಟ್ ಹೇಳಿತು.
‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯಲ್ಲಿ ಸಮಯ ನಿಗದಿ ಮಾಡಲಾಗಿದೆ. ಬಾಕಿ ಇರುವ ಎಲ್ಲಾ ಪ್ರಕರಣಗಳ ಬಗ್ಗೆ ನಮಗೊಂದು ಮಾರ್ಗಸೂಚಿ ಬೇಕು’ ಎಂದು ಕೋರ್ಟ್ ಹೇಳಿತು.
ಕಳ್ಳತನ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ 2024ರ ಆಗಸ್ಟ್‌ನಿಂದ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದೇನೆ. 2024ರ ಸೆಪ್ಟೆಂಬರ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ, ಇನ್ನೂ ದೋಷಾರೋಪ ನಿಗದಿ ಮಾಡಲಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿ ಅರುಣ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.