ಶ್ರೀನಗರ: ಜನರಿಗೆ ಅವರ ಹಕ್ಕುಗಳ ಕುರಿತು ತಿಳಿವಳಿಕೆಯಿರಬೇಕು. ಇಲ್ಲದಿದ್ದರೆ ಅದರಿಂದ ಯಾವುದೇ ಉಪಯೋಗವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಅಭಿಪ್ರಾಯಪಟ್ಟರು.
ಶ್ರೀನಗರದಲ್ಲಿ ಭಾನುವಾರ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉತ್ತರ ವಲಯ ಪ್ರಾದೇಶಿಕ ಸಮ್ಮೇಳನದಲ್ಲಿ(ಎನ್‌ಎಎಲ್‌ಎಸ್‌ಎ) ಮಾತನಾಡಿದರು.
ಜನರಿಗೆ ಅವರ ಹಕ್ಕುಗಳ ಕುರಿತು ತಿಳಿಸಿಕೊಡುವ ಪ್ರಯತ್ನವನ್ನು ದೇಶದೆಲ್ಲೆಡೆ ಎನ್‌ಎಎಲ್‌ಎಸ್‌ಎ ಮಾಡುತ್ತಿದೆ. ಎಲ್ಲಾ ನ್ಯಾಯಮೂರ್ತಿಗಳು ಹಾಗೂ ವಕೀಲರು ಸೇರಿಕೊಂಡು, ದೇಶದ ಕೊನೆಯ ನಾಗರಿಕರಿಗೂ ಸಂವಿಧಾನದ ಮೂಲಕ ನ್ಯಾಯಕೊಡಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ನ್ಯಾಯಾಂಗ ಮಾಡಬೇಕು. ಅಂಬೇಡ್ಕರ್ ಅವರು ‘ಒಂದು ವ್ಯಕ್ತಿ, ಒಂದು ಮತ’ ಮೂಲಕ ರಾಜಕೀಯ ನ್ಯಾಯವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಕಳೆದ 35 ವರ್ಷಗಳಿಂದ ಉದ್ವಿಗ್ನ ಪರಿಸ್ಥಿತಿಯಿದೆ. ಹಿಂದಿನ ತಪ್ಪುಗಳನ್ನು ಸರಿಪಡಿಸುವ ಅಗತ್ಯವಿದೆ. ನ್ಯಾಯಮೂರ್ತಿಗಳು ಹಾಗೂ ವಕೀಲರು ಸೇರಿಕೊಂಡು ಎಲ್ಲಾ ಸಮುದಾಯಗಳು ಸಾಮರಸ್ಯದಿಂದ ಬದುಕುತ್ತಿದ್ದ ಹಳೆಯ ಕಾಶ್ಮೀರವನ್ನು ಮರಳಿ ಸ್ಥಾಪಿಸಲು ಸಹಾಯ ಮಾಡಬೇಕಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಭೇಟಿ ನೀಡಿದನ್ನು ಸ್ಮರಿಸಿಕೊಂಡ ಬಿ.ಆರ್ ಗವಾಯಿ, ‘ಎರಡೂ ಕೇಂದ್ರಾಡಳಿತ ಪ್ರದೇಶಗಳ ಜನರು ಪ್ರೀತಿಯನ್ನು ನೀಡಿದ್ದಾರೆ. ಇದು ನನಗೆ ತವರೂರಿಗೆ ಭೇಟಿ ನೀಡಿದ ಅನುಭವ ಉಂಟುಮಾಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.