ADVERTISEMENT

ಡಿಜಿಟಲ್‌ ಅರೆಸ್ಟ್‌ | ಎಲ್ಲ ಪ್ರಕರಣ ಸಿಬಿಐಗೆ: ಸುಪ್ರೀಂ ಕೋರ್ಟ್‌ ನಿರ್ದೇಶನ

ತನಿಖೆಗೆ ಒಪ್ಪಿಗೆ ನೀಡಲು ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ‘ಸುಪ್ರೀಂ’ ತಾಕೀತು

ಪಿಟಿಐ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ದೇಶದಾದ್ಯಂತ ದಾಖಲಾಗಿರುವ ‘ಡಿಜಿಟಲ್‌ ಅರೆಸ್ಟ್‌’ ವಂಚನೆ ಪ್ರಕರಣಗಳ ತನಿಖೆಯನ್ನು ಒಟ್ಟುಗೂಡಿಸಿ ನಡೆಸಬೇಕೆಂದು ಸಿಬಿಐಗೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್‌, ಸೈಬರ್ ವಂಚನೆಗೆ ಬಳಸಲಾದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ಎ.ಐ ತಂತ್ರಜ್ಞಾನ ಏಕೆ ಬಳಸುತ್ತಿರಲಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅನ್ನು ಪ್ರಶ್ನಿಸಿದೆ.

ಟೆಲಿಕಾಂ ಸೇವಾ ಸಂಸ್ಥೆಗಳು ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಹಲವು ಸಿಮ್‌ಗಳನ್ನು ನೀಡದಂತೆ ನಿಗಾ ವಹಿಸಬೇಕು ಎಂದು ಟೆಲಿಕಾಂ ಸಚಿವಾಲಯಕ್ಕೂ ಕೋರ್ಟ್ ನಿರ್ದೇಶನ ನೀಡಿದೆ.

ADVERTISEMENT

ಪೊಲೀಸ್‌, ಜಾರಿ ನಿರ್ದೇಶನಾಲಯ ಇಲ್ಲವೆ ನ್ಯಾಯಾಲಯದ ಅಧಿಕಾರಿಗಳಂತೆ ಸೋಗಿನಲ್ಲಿ ಆಡಿಯೊ ಅಥವಾ ವಿಡಿಯೊ ಕರೆಗಳ ಮೂಲಕ ಜನಸಾಮಾನ್ಯರನ್ನು ವಂಚಿಸುತ್ತಿರುವ ಸೈಬರ್‌ ವಂಚನೆ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ‘ಡಿಜಿಟಲ್‌ ಅರೆಸ್ಟ್‌’ ಮೂಲಕ ಈ ರೀತಿ ಅಮಾಯಕರು ವಂಚನೆಗೆ ಒಳಗಾಗುತ್ತಿರುವ ಕುರಿತು ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.  

ಹರಿಯಾಣದ ವೃದ್ಧ ದಂಪತಿ ತಾವು ‘ಡಿಜಿಟಲ್‌ ಅರೆಸ್ಟ್‌’ನಲ್ಲಿ ₹1.5 ಕೋಟಿ ಕಳೆದುಕೊಂಡಿರುವ ಬಗ್ಗೆ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ. 

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರಿದ್ದ ಪೀಠವು, ‘ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಸೇರಿದಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯ ಇಂತಹ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಗೆ ನೀಡಬೇಕು’ ಎಂದು ಸೂಚಿಸಿದೆ.

ಸೈಬರ್ ವಂಚನೆಗೆ ಬಳಸಿದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ಎ.ಐ ಹಾಗೂ ಮಷಿನ್‌ ಲರ್ನಿಂಗ್ ತಂತ್ರಜ್ಞಾನವನ್ನು ಏಕೆ ಬಳಸುತ್ತಿರಲಿಲ್ಲ ಎಂಬ ವಿಷಯವಾಗಿ ಉತ್ತರ ನೀಡುವಂತೆಯೂ ಆರ್‌ಬಿಐಗೆ ನೋಟಿಸ್‌ ನೀಡಿದೆ.

ಹಿರಿಯ ನಾಗರಿಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸೈಬರ್‌ ವಂಚಕರು ದೋಚುತ್ತಿರುವುದನ್ನು ಗಮನಿಸಿರುವುದಾಗಿ ಕೋರ್ಟ್ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಸಿಬಿಐಗೆ ಅಗತ್ಯ ಮಾಹಿತಿ ಹಾಗೂ ಸಹಕಾರ ನೀಡುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚನೆ ನೀಡಿದೆ.

‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ದೇಶದ ಜನರನ್ನು ಬೆದರಿಸಿ ₹3,000 ಕೋಟಿಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ನವೆಂಬರ್‌ 3ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದವು. ‘ಈ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ’ ಎಂದು ಕೋರ್ಟ್‌ ಹೇಳಿತ್ತು. 

ಎಲ್ಲ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಇಂಥ ಪ್ರಕರಣಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಅ.27ರಂದು ನಡೆದ ವಿಚಾರಣೆ ವೇಳೆ ಸೂಚನೆ ನೀಡಿತ್ತು. ಇದರಂತೆ, ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿತ್ತು.

ಸಿಬಿಐಗೆ ಕೋರ್ಟ್‌ ಹೇಳಿದ್ದೇನು?

  • ನಾಗರಿಕರು ವಂಚನೆಗೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗಿ ವಂಚಕರ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ಪೊಲೀಸ್‌ ಇಲಾಖೆ ಮತ್ತು ಸಿಬಿಐಗೆ ಮುಕ್ತ ಅವಕಾಶವಿದೆ

  • ಶಂಕಾಸ್ಪದ ವಹಿವಾಟು ನಡೆಸುವ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸಲು ವಂಚಕರ ಜೊತೆ ಕೈ ಜೋಡಿಸಿರುವ ಬ್ಯಾಂಕ್‌ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿಬೇಕು

  • ಹೊರದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್‌ ವಂಚಕರನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ ನೆರವು ಪಡೆಯಬೇಕು

  • ತನಿಖಾ ತಂಡದ ಸದಸ್ಯರನ್ನಾಗಿ ರಾಜ್ಯಗಳ ಯಾವುದೇ ಅಧಿಕಾರಿ ಅಥವಾ ತಂತ್ರಜ್ಞಾನ ಪರಿಣತರನ್ನು ಬಳಸಿಕೊಳ್ಳಬಹುದು

  • ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳೂ ತಮ್ಮಲ್ಲಿ ದಾಖಲಾದ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು

‘ಸಮನ್ವಯ ಕೇಂದ್ರ ಸ್ಥಾಪಿಸಿ’

ಸಿಬಿಐ ಜೊತೆಗೆ ಉತ್ತಮ ಸಮನ್ವಯ ಖಾತರಿಪಡಿಸಿಕೊಳ್ಳಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಾದೇಶಿಕ ಅಥವಾ ರಾಜ್ಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.

‘ಸೈಬರ್‌ ವಂಚನೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಗೃಹ ಸಚಿವಾಲಯ ಟೆಲಿಕಾಂ ಸಚಿವಾಲಯ ಹಣಕಾಸು ಸಚಿವಾಲಯ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಭಿಪ್ರಾಯಗಳನ್ನು ತನ್ನ ಮುಂದೆ ಇಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದೆ. ಜನರನ್ನು ವಂಚಿಸಲು ಬಳಸುವ ಬ್ಯಾಂಕ್‌ ಖಾತೆಗಳನ್ನು ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಸಿಬಿಐ ಜೊತೆ ಸೇರಿಕೊಂಡು ಅವುಗಳನ್ನು ಸ್ಥಗಿತಗೊಳಿಸಲು ಸ್ವತಂತ್ರವಾಗಿವೆ’ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.