ADVERTISEMENT

ಕೋವಿಡ್: ಲಸಿಕೆ ಬೆಲೆ ನೀತಿ ಪರಿಷ್ಕರಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಪಿಟಿಐ
Published 3 ಮೇ 2021, 8:02 IST
Last Updated 3 ಮೇ 2021, 8:02 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪ್ರಸ್ತುತ ಜಾರಿಯಲ್ಲಿರುವ ಕೋವಿಡ್‌ ಲಸಿಕೆ ಬೆಲೆ ನೀತಿಯನ್ನು ಪರಿಷ್ಕರಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

‘ಲಸಿಕೆ ಬೆಲೆ ದುಬಾರಿಯಾದರೆ, ಸಾರ್ವನಿಕ ಆರೋಗ್ಯದ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‌ನ್ಯಾಯಮೂರ್ತಿ ಡಿ.ವೈ.ಚಂದ್ರೂಡ್ ನೇತೃತ್ವದ ಪೀಠ, ‘ಲಸಿಕೆ ತಯಾರಕರು ಎರಡು ವಿಭಿನ್ನ ದರಗಳನ್ನು ಸೂಚಿಸಿದ್ದಾರೆ. ಕಡಿಮೆ ದರ ಕೇಂದ್ರಕ್ಕೆ ಅನ್ವಯವಾದರೆ, ರಾಜ್ಯ ಸರ್ಕಾರಗಳು ಖರೀದಿಸಿರುವ ಲಸಿಕೆಗಳಿಗೆ ಹೆಚ್ಚು ದರ ಅನ್ವಯವಾಗುತ್ತದೆ‘ ಎಂದು ಉಲ್ಲೇಖಿಸಿದೆ.

ADVERTISEMENT

'ರಾಜ್ಯ ಸರ್ಕಾರಗಳು ಲಸಿಕೆ ಉತ್ಪಾದಕರೊಂದಿಗೆ ಮಾತುಕತೆ ನಡೆಸಬೇಕು. ಬೆಲೆ ನಿಗದಿಪಡಿಸುವ ವಿಚಾರದಲ್ಲಿ ಹೊಸ ಲಸಿಕೆ ಉತ್ಪಾದಕರಿಗೆ ತಿಳಿವಳಿಕೆ ನೀಡಿ. ಇಲ್ಲದಿದ್ದರೆ, 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು ತೊಂದರೆಯಾಗುತ್ತದೆ‘ ಎಂದು ನ್ಯಾಯಪೀಠ ಹೇಳಿದೆ.‌‌

18 ರಿಂದ 44 ವಯೋಮಾನದ ಗುಂಪಿನಲ್ಲಿ ಎಲ್ಲ ವರ್ಗದ ವ್ಯಕ್ತಿಗಳು ಬರುತ್ತಾರೆ. ಅದರಲ್ಲಿ ಹೆಚ್ಚಾಗಿ ವಿವಿಧ ದುರ್ಬಲ ವರ್ಗದವರು ಮತ್ತು ಬಡವರು ಸೇರಿರುತ್ತಾರೆ. ಇಂಥ ಗುಂಪಿಗೆ ಸೇರುವ ವ್ಯಕ್ತಿಗಳಿಗೆ ಅಷ್ಟು ಹಣ ನೀಡಿ ಲಸಿಕೆ ಖರೀದಿಸುವ ಸಾಮರ್ಥ್ಯವಿರುವುದಿಲ್ಲ. ಇಂಥ ದುರ್ಬಲ ವರ್ಗದವರಿಗೆ ಅಥವಾ ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟಕುವ ಬೆಲೆಯಲ್ಲಿ ಅಗತ್ಯವಿರುವ ಲಸಿಕೆಗಳನ್ನು ದೊರೆಯುವಂತೆ ಮಾಡುವುದು ಪ್ರತಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

‌‘ಇಂಥ ವರ್ಗದವರಿಗೆ ಅಗತ್ಯ ಲಸಿಕೆಗಳು ಲಭ್ಯವಾಗುತ್ತದೆಯೋ ಇಲ್ಲವೋ ಎಂಬುದು ಪ್ರತಿ ರಾಜ್ಯ ಸರ್ಕಾರ ಹೊಂದಿರುವ ತನ್ನದೇ ಆದ ಹಣಕಾಸಿನ ಆಧಾರದ ಮೇಲೆ ಹಾಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕೆ ಇಲ್ಲವೇ ಎಂದು ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಈ ಲಸಿಕೆ ಬೆಲೆ ನೀತಿಯಿಂದ ರಾಷ್ಟ್ರದಾದ್ಯಂತ ಅಸಮಾನತೆ ಉಂಟುಮಾಡುತ್ತದೆ‘ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದ್ದು, ‘ನಾಗರಿಕರಿಗೆ ನೀಡಲಾಗುವ ಲಸಿಕೆಗಳು ಅಮೂಲ್ಯವಾದ ಸಾರ್ವಜನಿಕ ಹಿತವನ್ನು ಹೊಂದಿರಬೇಕು‘ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರನ್ನು ಒಳಗೊಂಡಿರುವ ಈ ನ್ಯಾಯ ಪೀಠ, ‘ಕೇಂದ್ರ ಸರ್ಕಾರ ವಿವಿಧ ಸಾಮಾಜಿಕ ಸ್ತರಗಳ ಜನರನ್ನು ಒಳಗೊಂಡ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಗಳನ್ನು ನೀಡುವ ಜವಾಬ್ದಾರಿ ತೆಗೆದುಕೊಂಡಿದೆ. ಆದರೆ, ಅದೇ ಸ್ತರದದ ಜನರನ್ನು ಒಳಗೊಂಡಿರುವ 18 ರಿಂದ 44 ವಯೋಮಾನದವರಿಗೆ ಲಸಿಕೆ ನೀಡುವ ಹೊಣೆಯನ್ನು ರಾಜ್ಯ ಸರ್ಕಾರಕ್ಕೆವಹಿಸಿದೆ. ಸಮಾಜದಲ್ಲಿರುವ ವಿವಿಧ ವರ್ಗದ ನಾಗರಿಕರ ನಡುವೆ ಹೀಗೆ ತಾರತಮ್ಯ ಮಾಡಬಾರದು‘ ಎಂದು ಹೇಳಿದೆ.

‘ಆರ್ಟಿಕಲ್ 21ರ ಉಲ್ಲೇಖದಂತೆ ‘ಬದುಕುವ ಹಕ್ಕಿನ’ (ಇದು ಆರೋಗ್ಯದ ಹಕ್ಕನ್ನು ಒಳಗೊಂಡಿರುತ್ತದೆ)ನ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಲಸಿಕೆಗಳನ್ನು ಖರೀದಿಸಿ ಜನರಿಗೆ ವಿತರಿಸಬೇಕು. ಬೆಲೆ ನಿರ್ಧಾರಕ್ಕೆ ಸಂಬಂಧಿಸಿದಂತೆ ಲಸಿಕೆ ತಯಾರಕರೊಂದಿಗೆ ಮಾತುಕತೆ ನಡೆಸಬೇಕು‘ ಎಂದು ನ್ಯಾಯಾಲಯ ಹೇಳಿದೆ.

‘ಆದ್ದರಿಂದ, ಪ್ರಸ್ತುತದ ಲಸಿಕೆಯ ಬೆಲೆ ನೀತಿ, ಸಮಾಜದಲ್ಲಿ ತಾರತಮ್ಯವನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 14(ಕಾನೂನಿನ ಎದುರು ಎಲ್ಲರೂ ಸಮಾನರು) ಮತ್ತು ಆರ್ಟಿಕಲ್‌ 21(ಜೀವ ಸಂರಕ್ಷಣೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ)ರಲ್ಲಿರುವಂತೆ ಹಾಲಿ ಇರುವ ಲಸಿಕೆ ನೀತಿಯನ್ನು ಪರಿಷ್ಕರಿಸುವ ವಿಶ್ವಾಸವಿದೆ‘ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.