ADVERTISEMENT

ಗೋಧ್ರಾ ರೈಲು ಹತ್ಯಾಕಾಂಡ: ಎಂಟು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2023, 16:30 IST
Last Updated 21 ಏಪ್ರಿಲ್ 2023, 16:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: 2002ರಲ್ಲಿ ಸಾಬರಮತಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಲಾಗಿರುವ ನಾಲ್ವರಿಗೆ ಜಾಮೀನು ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಅಪರಾಧಿಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ನಡೆಸಿತು.

‘ಅಪರಾಧಿಗಳು 17–18 ವರ್ಷಗಳಿಂದಲೂ ಜೈಲಿನಲ್ಲಿದ್ದಾರೆ. ಅವರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿತು.

ADVERTISEMENT

ಗುಜರಾತ್‌ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಗುಜರಾತ್‌ನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಪಾತ್ರವಿದ್ದು, ಇವರಿಗೆ ಜಾಮೀನು ನೀಡುವುದಕ್ಕೆ ನಮ್ಮ ಆಕ್ಷೇಪವಿದೆ. ಇವರ ಅರ್ಜಿಗಳನ್ನು ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್‌ ಹೆಗ್ಡೆ, ‘ಅಪರಾಧಿಗಳ ಪೈಕಿ ನಾಲ್ವರಿಗೆ ಜಾಮೀನು ನೀಡಬಾರದೆಂದು ಮೆಹ್ತಾ ಆಗ್ರಹಿಸಿದ್ದಾರೆ. ಬೇಕಿದ್ದರೆ ನಾಲ್ವರ ಅರ್ಜಿ ವಿಚಾರಣೆಯನ್ನು ಎರಡು ವಾರಗಳವರೆಗೆ ಮುಂದೂಡಿ, ಇತರರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.

ಅರ್ಜಿದಾರರ ಪರವಾಗಿ ಹಾಜರಿದ್ದ ಮತ್ತೊಬ್ಬ ವಕೀಲ, ‘ನ್ಯಾಯಪೀಠವು ನಾಲ್ವರ ಜಾಮೀನು ಅರ್ಜಿ ರದ್ದುಪಡಿಸಬಾರದು. ಬೇಕಿದ್ದರೆ ವಿಚಾರಣೆ ಮುಂದೂಡಬೇಕು’ ಎಂದು ವಿನಂತಿಸಿದರು.

ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ‘ಸೆಷನ್ಸ್‌ ನ್ಯಾಯಾಲಯ ವಿಧಿಸಿರುವ ಷರತ್ತುಗಳ ಆಧಾರದಲ್ಲಿ ಎಂಟು ಮಂದಿಯನ್ನು ಜೈಲಿನಿಂದ ಬಿಡುಗಡೆ ಮಾಡಲು ನಾವು ಆದೇಶಿಸುತ್ತಿದ್ದೇವೆ’ ಎಂದು ಹೇಳಿತು.

‘ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದ ಅಮಾನವೀಯ ಘಟನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿ ಒಟ್ಟು 59 ಮಂದಿ ಸಜೀವ ದಹನವಾಗಿದ್ದಾರೆ. ಇದು ಅಪರೂಪದಲ್ಲೇ ಅಪರೂಪದ ಪ್ರಕರಣ. ಹೀಗಾಗಿ ಅಪರಾಧಿಗಳಿಗೆ ಜಾಮೀನು ನೀಡಬಾರದು’ ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿತ್ತು.

ಪ್ರಕರಣದ ಅಪರಾಧಿಯೊಬ್ಬನಿಗೆ ನ್ಯಾಯಾಲಯವು ಕಳೆದ ವರ್ಷದ ಡಿಸೆಂಬರ್‌ 15ರಂದು ಜಾಮೀನು ನೀಡಿತ್ತು. ಅಪರಾಧಿಯು ಕಲ್ಲು ತೂರಾಟ ನಡೆಸಿದ್ದನೇ ಹೊರತು ರೈಲಿಗೆ ಬೆಂಕಿ ಹಚ್ಚಿರಲಿಲ್ಲ ಎಂದು ನ್ಯಾಯಪೀಠ ಆಗ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.