ADVERTISEMENT

ಕೇಂದ್ರ ಸರ್ಕಾರ vs ಸುಪ್ರೀಂ ಕೋರ್ಟ್ ಸಂಘರ್ಷದ ಹೊಗೆಗೆ ಕಿಡಿ ಹೊತ್ತಿಸಿದ ‘ಪಠ್ಯ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 12:13 IST
Last Updated 26 ಫೆಬ್ರುವರಿ 2026, 12:13 IST
<div class="paragraphs"><p>ಸುಪ್ರೀಂ ಕೋರ್ಟ್ ಹಾಗೂ ಸಂಸತ್ ಭವನ</p></div>

ಸುಪ್ರೀಂ ಕೋರ್ಟ್ ಹಾಗೂ ಸಂಸತ್ ಭವನ

   

ಪಿಟಿಐ ಚಿತ್ರಗಳು

ಎನ್‌ಸಿಇಆರ್‌ಟಿಯ 8ನೇ ತರಗತಿಯ ‍ಪಠ್ಯಪುಸ್ತಕದ ಅಧ್ಯಾಯವೊಂದರಲ್ಲಿ 'ನ್ಯಾಯಾಂಗ ಭ್ರಷ್ಟಾಚಾರ' ಕುರಿತು ಸೇರಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ. ಪಠ್ಯ ಪುಸ್ತಕವನ್ನು ನಿಷೇಧಿಸಿ ಗುರುವಾರ ಆದೇಶಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಪುಸ್ತಕಗಳನ್ನು ಜಪ್ತಿ ಮಾಡಿ, ಡಿಜಿಟಲ್ ಪ್ರತಿಯನ್ನೂ ತೆಗೆದುಹಾಕುವಂತೆ ಆದೇಶಿಸಿದೆ.

ADVERTISEMENT

2014ರಿಂದ ಈಚೆಗೆ, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನಡುವೆ ಹಲವು ಭಿನ್ನಾಭಿಪ್ರಾಯಗಳು ಉದ್ಭವಿಸಿವೆ. ಸರ್ಕಾರದ ಹಲವು ನಿರ್ಧಾರಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಅಥವಾ ರದ್ದು ಮಾಡಿದ ಪ್ರಸಂಗಗಳಿವೆ. 2014ರ ಬಳಿಕ ನಡೆದ ಇಂತಹ ಪ್ರಮುಖ ಘಟನೆಗಳು ಇಲ್ಲಿವೆ.

ನ್ಯಾಯಾಂಗ ನೇಮಕಾತಿ ಕಾಯ್ದೆ (ಎನ್‌ಜೆಎಸಿ) ರದ್ದು (2015)

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ (ಎನ್‌ಜೆಎಸಿ) ಮತ್ತು ಸಾಂವಿಧಾನ 99ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 2015ರಲ್ಲಿ ರದ್ದುಗೊಳಿಸಿತು. ಈ ಕಾಯ್ದೆಯು ನ್ಯಾಯಾಧೀಶರ ನೇಮಕಾತಿಯಲ್ಲಿ 'ಕೊಲಿಜಿಯಂ' ವ್ಯವಸ್ಥೆಯ ಬದಲು ಕಾರ್ಯಾಂಗದ ಸದಸ್ಯರನ್ನು ಒಳಗೊಂಡ ಆಯೋಗವನ್ನು ತರಲು ಪ್ರಯತ್ನಿಸಿತ್ತು.

ನ್ಯಾಯಾಂಗ ನೇಮಕಾತಿಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಈ ಸುಧಾರಣೆ ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಆದರೆ, ನೇಮಕಾತಿಗಳಲ್ಲಿ ನ್ಯಾಯಾಂಗದ ಪ್ರಾಶಸ್ತ್ಯವು ಸಂವಿಧಾನದ 'ಮೂಲ ರಚನೆ'ಯ ಭಾಗವಾಗಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, 4:1 ಬಹುಮತದ ತೀರ್ಪು ನೀಡಿ ಆ ಕಾಯ್ದೆಯನ್ನು ಅಸಿಂಧುಗೊಳಿಸಿತು.

ಮೆಮೊರಾಂಡಮ್ ಆಫ್ ಪ್ರೊಸೀಜರ್ (MoP) ಬಿಕ್ಕಟ್ಟು (2015–2017)

ಎನ್‌ಜೆಎಸಿ ತೀರ್ಪಿನ ನಂತರ, ನ್ಯಾಯಾಂಗ ನೇಮಕಾತಿಗಳ ಕಾರ್ಯವಿಧಾನದ ಕೈಪಿಡಿಯನ್ನು (MoP) ಪರಿಷ್ಕರಿಸುವ ಕುರಿತು ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನಡುವೆ ಸುದೀರ್ಘ ಮಾತುಕತೆಗಳು ನಡೆದವು. ರಾಷ್ಟ್ರೀಯ ಭದ್ರತೆ ಮತ್ತು ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದ ನಿಯಮಗಳ ಮೂಲಕ ಹೆಚ್ಚಿನ ಅಧಿಕಾರ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಆದರೆ, ಕಾರ್ಯಾಂಗದ ವಿವೇಚನಾಧಿಕಾರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕುಂದಿಸಬಾರದು ಎಂದು ನ್ಯಾಯಾಲಯ ಗಟ್ಟಿ ದನಿಯಲ್ಲಿ ಹೇಳಿತು. ಇದರಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೇಮಕಾತಿಗಳಲ್ಲಿ ವಿಳಂಬವಾಯಿತು.

ಆಧಾರ್ ತೀರ್ಪು (2016–2018)

ಕೇಂದ್ರ ಸರ್ಕಾರವು ಜಾರಿಗೆ ತಂದ ಆಧಾರ್ ಯೋಜನೆಯು ಗೋ‍ಪ್ಯತೆ ಮತ್ತು ಕಣ್ಗಾವಲು ಕುರಿತಾದ ಸಾಂವಿಧಾನಿಕ ಸವಾಲುಗಳನ್ನು ಎದುರಿಸಿತು. 2018ರ ಸೆಪ್ಟೆಂಬರ್‌ನಲ್ಲಿ , ಸುಪ್ರೀಂ ಕೋರ್ಟ್ ಆಧಾರ್ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿಯಿತಾದರೂ, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸುವುದನ್ನು ರದ್ದುಗೊಳಿಸಿತು. ಈ ತೀರ್ಪು ಕಲ್ಯಾಣ ಯೋಜನೆಗಳಾಚೆಗೆ ಆಧಾರ್ ಬಳಕೆಯನ್ನು ವಿಸ್ತರಿಸುವ ಕಾರ್ಯಾಂಗದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಸೀಮಿತಗೊಳಿಸಿತು.

ಪೆಗಾಸಸ್ ಕಣ್ಗಾವಲು ಪ್ರಕರಣ (2021)

ಭಾರತೀಯ ನಾಗರಿಕರ ಮೇಲೆ ಪೆಗಾಸಸ್ ಸ್ಪೈವೇರ್ ಬಳಸಿ ಕಣ್ಗಾವಲು ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾದವು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ವಿವರವಾದ ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರ ನಿರಾಕರಿಸಿತು. ಈ ಬಗ್ಗೆ ಅಕ್ಟೋಬರ್ 2021ರಲ್ಲಿ ಸ್ವತಂತ್ರ ತಾಂತ್ರಿಕ ಸಮಿತಿಯನ್ನು ನೇಮಿಸಿದ ಸುಪ್ರೀಂ ಕೋರ್ಟ್, ನ್ಯಾಯಾಂಗ ವಿಮರ್ಶೆಯ ವಿರುದ್ಧ ರಾಷ್ಟ್ರೀಯ ಭದ್ರತೆಯನ್ನು ’ಗುರಾಣಿ’ಯಾಗಿ ಬಳಸಲಾಗದು ಎಂದು ಸ್ಪಷ್ಟಪಡಿಸಿತು.

ಚುನಾವಣಾ ಬಾಂಡ್ ರದ್ದು ತೀರ್ಪು (2024)

2018ರಲ್ಲಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು 2024ರ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಅನಾಮಧೇಯ ರಾಜಕೀಯ ದೇಣಿಗೆಯು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಮತದಾರರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ದೇಣಿಗೆ ನೀಡಿದವರ ವಿವರಗಳನ್ನು ಬಹಿರಂಗಪಡಿಸಲು ಸೂಚಿಸಿದ ನ್ಯಾಯಾಲಯವು, ಈ ಯೋಜನೆಗಾಗಿ ವಿವಿಧ ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಗಳನ್ನೂ ಅಸಿಂಧುಗೊಳಿಸಿತು.

ಕೊಲಿಜಿಯಂ ಶಿಫಾರಸುಗಳು ಮತ್ತು ನೇಮಕಾತಿ ವಿಳಂಬ

2021–2023 ಅವಧಿಯಲ್ಲಿ, ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ಹೆಸರುಗಳನ್ನು ಅಂಗೀಕರಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ ಬಹಿರಂಗವಾಗಿ ಆಕ್ಷೇಪಿಸಿತು. ಮರುಪರಿಶೀಲನೆಗೆ ಕೋರುವುದು ತನ್ನ ಹಕ್ಕು ಎಂದು ಸರ್ಕಾರ ವಾದಿಸಿದರೆ, ಒಮ್ಮೆ ಶಿಫಾರಸು ಮಾಡಿದ್ದನ್ನು ಪುನರುಚ್ಚರಿಸಿದರೆ ಅದನ್ನು ಅಂಗೀಕರಿಸುವುದು ಕಡ್ಡಾಯ ಎಂದು ನ್ಯಾಯಾಲಯ ಪ್ರತಿಪಾದಿಸಿತು. ಈ ಸಂಘರ್ಷವು ನ್ಯಾಯಾಂಗ ನೇಮಕಾತಿಗಳ ವಿಳಂಬಕ್ಕೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.