ನವದೆಹಲಿ: ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ಮತ್ತು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭೆ ಕ್ಷೇತ್ರ ಸೇರಿದಂತೆ ದೇಶದ ವಿವಿಧೆಡೆ ನಡೆದಿದೆ ಎನ್ನಲಾದ ಮತ ಕಳವು ಆರೋಪಕ್ಕೆ ಸಂಬಂಧಿಸಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಎಸ್‌ಐಟಿ ರಚಿಸಲು ಸೂಚಿಸುವಂತೆ ಸುಪ್ರೀಂ ಕೋರ್ಟ್ ವಕೀಲ ಮತ್ತು ಕಾಂಗ್ರೆಸ್ ಮುಖಂಡ ರೋಹಿತ್ ಪಾಂಡೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ ಮಾಲ್ಯಾ ಬಾಗ್ಚಿ ಅವರ ಪೀಠ ನಡೆಸಿತು.
‘ಇದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಎಂದು ಹೇಳುತ್ತಿದ್ದೀರಿ. ಇದು ನಿಜವೂ ಇರಬಹುದು. ಆದರೆ, ನಿಮ್ಮ ಕೋರಿಕೆಯನ್ನು ಚುನಾವಣಾ ಆಯೋಗದ ಮುಂದಿಡಿ’ ಎಂದು ಪೀಠವು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ‘ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ. ಆಯೋಗವು ಅದನ್ನು ಸ್ವೀಕರಿಸಿಯೇ ಇಲ್ಲ’ ಎಂದರು.
‘ನಮ್ಮ ಮನವಿಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಆಯೋಗಕ್ಕೆ ಕಾಲಮಿತಿಯನ್ನು ವಿಧಿಸಿ’ ಎಂದು ರೋಹಿತ್ ಪೀಠವನ್ನು ಕೋರಿದರು. ಪೀಠವು ಈ ಮನವಿಯನ್ನೂ ತಿರಸ್ಕರಿಸಿತು. ‘ಇಂಥ ಸೂಚನೆ ನೀಡಲು ಸಾಧ್ಯವಿಲ್ಲ’ ಎಂದಿತು.
ಮತ ಕಳ್ಳತನದ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಮಾಧ್ಯಮಗೋಷ್ಠಿಗಳನ್ನು ಉಲ್ಲೇಖಿಸಿ ಪಿಐಎಲ್ ಸಲ್ಲಿಸಲಾಗಿತ್ತು. ರಾಹುಲ್ ಅವರು ಉಲ್ಲೇಖಿಸಿದ ಅಂಕಿ–ಅಂಶಗಳನ್ನೂ ಅರ್ಜಿಯಲ್ಲಿ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.