ADVERTISEMENT

ಭೂ ಸ್ವಾಧೀನ ಪ್ರಕರಣಗಳಲ್ಲಿ ಪುನರ್ವಸತಿ ಅಗತ್ಯವಲ್ಲ: ಸುಪ್ರೀಂ ಕೋರ್ಟ್‌  

ಪಿಟಿಐ
Published 15 ಜುಲೈ 2025, 14:41 IST
Last Updated 15 ಜುಲೈ 2025, 14:41 IST
   

ನವದೆಹಲಿ: ‘ಭೂ ಸ್ವಾಧೀನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲೂ ಭೂ ಮಾಲೀಕರಿಗೆ ಆರ್ಥಿಕ ಪರಿಹಾರದ ಜತೆ‌ಗೆ ಪುನರ್ವಸತಿಯನ್ನೂ ಕಲ್ಪಿಸಬೇಕೆಂಬ ಅಗತ್ಯವಿಲ್ಲ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಸರ್ಕಾರಗಳು ಪುನರ್ವಸತಿ ಯೋಜನೆಗಳನ್ನು ಘೋಷಿಸುವುದು ಸೂಕ್ತ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. 

ಹರಿಯಾಣದ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಭೂ ಮಾಲೀಕರ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಪಿ. ಪಾರ್ದೀವಾಲಾ, ನ್ಯಾಯಮೂರ್ತಿ ಆರ್‌.ಮಹದೇವನ್‌ ಅವರನ್ನು ಒಳಗೊಂಡ ಪೀಠವು, ‘ವಿರಳಾತಿ ವಿರಳ ಪ್ರಕರಣಗಳಲ್ಲಷ್ಟೇ ರಾಜ್ಯ ಸರ್ಕಾರವು  ಪರಿಹಾರದ ಜೊತೆ ಪುನರ್ವಸತಿ ಯೋಜನೆಯನ್ನೂ ಜಾರಿಗೊಳಿಸಬಹುದು. ಅಲ್ಲದೇ, ಈ ಪ್ರಕರಣಗಳು ದೇಶದ ಇತರೆ ರಾಜ್ಯಗಳೂ ಗಮನಹರಿಸುವಂಥದ್ದು’ ಎಂದಿದೆ. 

‘ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ಭೂ ಸ್ವಾಧೀನ ಕಾಯ್ದೆಯಡಿ ರಾಜ್ಯ ಸರ್ಕಾರಗಳು ಅಥವಾ ಸಂಬಂಧಿಸಿದ ಪ್ರಾಧಿಕಾರಗಳು ಜಮೀನನ್ನು  ಸ್ವಾಧೀನ ಪಡಿಸಿಕೊಂಡರೆ, ಭೂ ಮಾಲೀಕರಿಗೆ ಕಾನೂನು ಬದ್ಧವಾಗಿ ಪರಿಹಾರ ನೀಡುವುದು ನ್ಯಾಯಸಮ್ಮತ ’ ಎಂದು ನ್ಯಾಯಪೀಠ ಹೇಳಿದೆ. 

ADVERTISEMENT

ಅಲ್ಲದೇ, ‘ಭೂ ಮಾಲೀಕರಿಗೆ ಪರಿಹಾರ ನೀಡುವಾಗ ಸಮಾನತೆ ಮತ್ತು ಮಾನವೀಯ ದೃಷ್ಟಿಕೋನಗಳನ್ನಷ್ಟೇ ಹೊಂದಿರಬೇಕು. ವಶಪಡಿಸಿಕೊಂಡ ಜಮೀನನ್ನು ಕಳೆದುಕೊಂಡರೆ ಮಾಲೀಕನ ಜೀವನದ ಮೂಲಭೂತ ಅವಶ್ಯಕತೆಗೆ ತೊಂದರೆಯಾಗುತ್ತದೆ ಎನ್ನುವ ಸ್ಥಿತಿ ಇದ್ದರೆ ಅಂಥ ವಿರಳ ಪ್ರಕರಣಗಳಲ್ಲಿ ಮಾತ್ರ ಪುನರ್ವಸತಿ ಕಲ್ಪಿಸಿಕೊಡಬೇಕಾಗುತ್ತದೆ’ ಎಂದೂ ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.