ADVERTISEMENT

ಸರ್ಕಾರಿ ಹುದ್ದೆಗೆ ಗರಿಷ್ಠ 2 ಮಕ್ಕಳ ಮಿತಿ: ಸರ್ಕಾರದ ಕ್ರಮ ಎತ್ತಿ ಹಿಡಿದ SC

ಪಿಟಿಐ
Published 29 ಫೆಬ್ರುವರಿ 2024, 13:55 IST
Last Updated 29 ಫೆಬ್ರುವರಿ 2024, 13:55 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಸರ್ಕಾರಿ ನೌಕರಿ ಪಡೆಯಬೇಕೆಂದರೆ ಗರಿಷ್ಠ 2 ಮಕ್ಕಳ ಮಿತಿಯನ್ನು ಕಡ್ಡಾಯಗೊಳಿಸಿರುವ ರಾಜಸ್ಥಾನ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ‘ಇದು ತಾರತಮ್ಯವೂ ಅಲ್ಲ, ಸಂವಿಧಾನದ ಉಲ್ಲಂಘನೆಯೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಷರತ್ತು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ರಾಜಸ್ಥಾನ ನಾಗರಿಕ ಸೇವಾ ಅಧಿನಿಯಮ 2001ರ ಅನ್ವಯ ಸರ್ಕಾರಿ ನೌಕರಿ ಬಯಸುವ ಅಭ್ಯರ್ಥಿಗಳಿಗೆ 2ಕ್ಕಿಂಥ ಹೆಚ್ಚು ಮಕ್ಕಳು ಇರುವಂತಿಲ್ಲ ಎಂದೆನ್ನಲಾಗಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಮಾಜಿ ಯೋಧ ರಾಮ್‌ಜಿ ಲಾಲ್ ಜಾಟ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. 2017ರಲ್ಲಿ ಸೇನೆಯಿಂದ ನಿವೃತ್ತರಾದ ನಂತರ ರಾಮ್‌ಜಿ ಅವರು, ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಗರಿಷ್ಠ 2 ಮಕ್ಕಳ ಮಿತಿ ಹೇರಿದ್ದರಿಂದ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ನ್ಯಾ. ಸೂರ್ಯಕಾಂತ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘2002ರ ಜೂನ್ 1ರಿಂದ ಅನ್ವಯವಾಗುವಂತೆ ರಾಜಸ್ಥಾನ ಪೊಲೀಸ್ ಇಲಾಖೆಗೆ ನೇಮಕಗೊಳ್ಳುವವರಿಗೆ 2ಕ್ಕಿಂತ ಹೆಚ್ಚು ಮಕ್ಕಳು ಇರುವಂತಿಲ್ಲ ಎಂಬ ಷರತ್ತು ಸೇರಿಸಲಾಗಿತ್ತು ಎಂಬ ಅಂಶವನ್ನು ಸರ್ಕಾರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

‘ಈ ಕಾನೂನಿನ ಮೂಲ ಉದ್ದೇಶ ಕುಟುಂಬ ಕಲ್ಯಾಣ ಯೋಜನೆಯಾಗಿದೆ. ಹೀಗಾಗಿ ಇದು ತಾರತಮ್ಯವೂ ಅಲ್ಲ, ಸಂವಿಧಾನದ ಉಲ್ಲಂಘನೆಯೂ ಅಲ್ಲ’ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ನ್ಯಾಯಪೀಠ ಪುರಸ್ಕರಿಸಿ, ಅರ್ಜಿ ವಜಾಗೊಳಿಸಿದೆ.

ಇದಕ್ಕೂ ಮೊದಲು ರಾಮ್‌ಜಿ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರ ಅರ್ಜಿ ವಜಾಗೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡಾ ಅವರ ಅರ್ಜಿ ವಜಾಗೊಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.