ADVERTISEMENT

ಸಿಮಿ ನಂಟು ಆರೋಪ ಎದುರಿಸುತ್ತಿದ್ದ 122 ಮಂದಿಯನ್ನು ಖುಲಾಸೆಗೊಳಿಸಿದ ಸೂರತ್ ಕೋರ್ಟ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 3:18 IST
Last Updated 7 ಮಾರ್ಚ್ 2021, 3:18 IST
ಪ್ರಾತಿನಿಧಿಕ ಚಿತ್ರ (Getty Images)
ಪ್ರಾತಿನಿಧಿಕ ಚಿತ್ರ (Getty Images)   

ಸೂರತ್: ನಿಷೇಧಿತ ಸಿಮಿ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ 122 ಮಂದಿಯನ್ನು ಇಲ್ಲಿನ ನ್ಯಾಯಾಲಯ ಖುಲಾಸೆ ಗೊಳಿಸಿದೆ.

2001ರ ಡಿಸೆಂಬರ್‌ನಲ್ಲಿ ಸಿಮಿ ಸಂಘಟನೆಯ ಸಭೆಯಲ್ಲಿ ಭಾಗಿಯಾದ ಆರೋಪದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎ.ಎನ್. ದಾವೆ ಅವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ADVERTISEMENT

ಆರೋಪಿಗಳು ಸಿಮಿ ಸದಸ್ಯರು ಮತ್ತು ಸಿಮಿ ಚಟುವಟಿಕೆಗಳಿಗಾಗಿ ಸಭೆ ಸೇರಿದ್ದರು ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿರುವುದರಿಂದ ಸಾಕ್ಷ್ಯಾಧಾರಗಳ ಕೊರತೆ ಪರಿಗಣಿಸಿ ಆರೋಪಿಗಳನ್ನು ಖುಲಾಸೆ ಗೊಳಿಸಲಾಗುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

2001ರ ಡಿಸೆಂಬರ್ 28ರಂದು ಸೂರತ್ ಪೊಲೀಸರು 127 ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರದವರು ಇದ್ದರು. ಈ ಪೈಕಿ, ಐವರು ಆರೋಪಿಗಳು ವಿಚಾರಣೆ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ತಾವು ಸಿಮಿ ಸಭೆಯಲ್ಲಿ ಭಾಗವಹಿಸಿಲ್ಲ. ಅಖಿಲ ಭಾರತ ಅಲ್ಪಸಂಖ್ಯಾತ ಶಿಕ್ಷಣ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದೆವು ಎಂದು ಆರೋಪಿಗಳು ಹೇಳಿಕೊಂಡಿದ್ದರು. ಶಾಂತಿಯುತವಾಗಿ ನಡೆಯುವ ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಬಂದಿರುವುದಾಗಿಯೂ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.