ಸುರೇಶ್ ಗೋಪಿ, ಕೇಂದ್ರ ಸಚಿವ
– ಫೇಸ್‌ಬುಕ್ ಚಿತ್ರ (@ActorSureshGopi)
ಕಣ್ಣೂರು: ಸಚಿವ ಸ್ಥಾನದಿಂದ ನಟನೆಗೆ ಗಮನ ಕೊಡಲು ಅಸಾಧ್ಯವಾಗುತ್ತಿದ್ದು, ಆದಾಯಕ್ಕೆ ಸಮಸ್ಯೆ ಆಗುತ್ತಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಆರ್‌ಎಸ್‌ಎಸ್ ನಾಯಕ ಸದಾನಂದ ಮಾಸ್ಟರ್ ಅವರಿಗೆ ಕಣ್ಣೂರಿನಲ್ಲಿ ಭಾನುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.
‘ಕೇಂದ್ರ ಸಚಿವ ಸ್ಥಾನದಿಂದಾಗಿ ಸಿನಿಮಾಗಳಲ್ಲಿ ನಟಿಸಲಾಗುತ್ತಿಲ್ಲ. ಇದರಿಂದ ಆದಾಯಕ್ಕೆ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಕೇರಳದ ತ್ರಿಶೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ನಟ ಸುರೇಶ್ ಗೋಪಿ, ಕೇಂದ್ರ ಸಚಿವ ಸ್ಥಾನದಿಂದಾಗಿ ಆದಾಯಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.
‘ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರಿಂದ ಕಣ್ಣೂರಿನ ಸಿಪಿಎಂ ನಾಯಕರಲ್ಲಿ ಭಯ ಉಂಟಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರು ಹಾಗೂ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಅವರು ಭಯಭೀತರಾಗಿದ್ದಾರೆ’ ಎಂದು ಹೇಳಿದ್ದಾರೆ.
‘ಪ್ರಾಮಾಣಿಕತೆಯಿಂದ ಹೇಳುತ್ತಿದ್ದೇನೆ, ಸದಾನಂದ ಮಾಸ್ಟರ್ ಅವರನ್ನು ನನ್ನ ಬದಲಿಗೆ ಕೇಂದ್ರ ಸಚಿವರನ್ನಾಗಿ ಮಾಡಬೇಕು. ಹೀಗಾದರೆ ಕೇರಳದ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ನಾನು ನಂಬುತ್ತೇನೆ. ಕಿರಿಯ ಸಂಸದನಾಗಿದ್ದರೂ ನನ್ನನ್ನು ಕೇಂದ್ರ ಸಚಿವನನ್ನಾಗಿ ಮಾಡಲಾಯಿತು. ಕೇರಳದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಸಂಸದನಾಗಿ ಮಾಡಿದ ಜನರ ತೀರ್ಪು ಇದಕ್ಕೆ ಕಾರಣ’ ಎಂದು ಹೇಳಿದ್ದಾರೆ.
‘ಜವಾಬ್ದಾರಿ ಹಾಗೂ ನಟನೆಯಲ್ಲಿ ಮುಂದುವರಿಯಲು ಸಚಿವ ಸ್ಥಾನದಿಂದ ದೂರ ನಿಲ್ಲುವುದಾಗಿ ಚುನಾವಣೆಗೂ ಮೊದಲೇ ಹೇಳಿದ್ದೆ. ನಟನೆಯಿಂದ ಆದಾಯ ಬರುತ್ತದೆ. ಆದಾಯದಿಂದ ಕುಟುಂಬದವರು ಹಾಗೂ ಬೇರೆಯವರಿಗೆ ಸಹಾಯ ಮಾಡಲು ಆಗುತ್ತಿತ್ತು. ಇದೀಗ ಆದಾಯಕ್ಕೆ ಹೊಡೆತ ಬಿದ್ದಿದೆ’ ಎಂದು ಅವರು ಹೇಳಿದ್ದಾರೆ.
ಪೆಟ್ರೋಲಿಯಂ ಹಾಗೂ ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿ ಹೊಣೆಗಾರಿಕೆ ವಹಿಸಿದ ಬಳಿಕ ನಟನೆಯಲ್ಲಿ ಮುಂದುವರಿಯಲು ಬಿಜೆಪಿ ನಾಯಕತ್ವ ಗೋಪಿಯವರಿಗೆ ಅನುಮತಿ ನೀಡಿತ್ತು ಎನ್ನುವ ವರದಿಗಳಿದ್ದವು. ಬಳಿಕ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಪೂರ್ತಿಗಳಿಸಲು ಅನುಮತಿ ಕೊಡಲಾಗಿತ್ತು.
ಸಚಿವರಾದ ಬಳಿಕ ನಟಿಸಿದ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. ‘ಜಾನಕಿ’ ಹೆಸರು ಬಳಕೆ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸಬಹುದು ಎಂದು ಸೆನ್ಸರ್ ಬೋರ್ಡ್ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.