ADVERTISEMENT

ವೃದ್ಧೆಗೆ ಅಸೂಕ್ಷ್ಮ ಪದ ಬಳಕೆ; ವಿವಾದಕ್ಕೆ ಸಿಲುಕಿದ ಕೇಂದ್ರ ಸಚಿವ ಸುರೇಶ್ ಗೋಪಿ

ಪಿಟಿಐ
Published 18 ಸೆಪ್ಟೆಂಬರ್ 2025, 11:41 IST
Last Updated 18 ಸೆಪ್ಟೆಂಬರ್ 2025, 11:41 IST
<div class="paragraphs"><p>ಕೇಂದ್ರ ಸಚಿವ ಸುರೇಶ್ ಗೋಪಿ</p></div>

ಕೇಂದ್ರ ಸಚಿವ ಸುರೇಶ್ ಗೋಪಿ

   

ಪಿಟಿಐ ಚಿತ್ರ

ತ್ರಿಶೂರ್: ಜನಸಂಪರ್ಕ ಸಭೆಯಲ್ಲಿ ವೃದ್ಧೆಯೊಬ್ಬರನ್ನು ಉದ್ದೇಶಿಸಿ ಸಂವೇದನಾ ರಹಿತ ಹೇಳಿಕೆ ನೀಡಿದ ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ADVERTISEMENT

ಈ ಹಿಂದೆ ಮನೆ ಕಟ್ಟಲು ಸಹಾಯ ಕೋರಿ ಬಂದಿದ್ದ ವೃದ್ಧರೊಬ್ಬರ ಅರ್ಜಿಯನ್ನು ಸ್ವೀಕರಿಸಲು ಗೋಪಿ ನಿರಾಕರಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ಸಚಿವರು, ‘ನಾನು ಎಂದಿಗೂ ಈಡೇರಿಸಲಾಗದ ಭರವಸೆಗಳನ್ನು ನೀಡುವುದಿಲ್ಲ’ ಎಂದಿದ್ದರು.

ಆನಂದವಳ್ಳಿ ಗ್ರಾಮದ ಹಿರಿಯ ಮಹಿಳೆಯೊಬ್ಬರು ಸಚಿವ ಗೋಪಿ ಅವರನ್ನು ಭೇಟಿ ಮಾಡಿ, ವಿವಾದಕ್ಕೆ ಸಿಲುಕಿರುವ ಸಿಪಿಐಎಂ ಮುಖಂಡನಿಗೆ ಸೇರಿದ ಕರುವಣ್ಣೂರ್‌ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವನ್ನು ತನಗೆ ಮರಳಿ ಕೊಡಿಸುವಂತೆ ಬೇಡಿಕೊಂಡರು. ಬ್ಯಾಂಕ್‌ನಲ್ಲಿ ಹಣ ಇಟ್ಟ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯವು ಇದರ ತನಿಖೆ ಕೈಗೊಂಡಿದೆ.

ಮಹಿಳೆಯ ಕೋರಿಕೆಗೆ ಅಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಗೋಪಿ, ‘ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿರುವ ಈ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಹೋಗಿ ಮುಖ್ಯಮಂತ್ರಿ ಅಥವಾ ಮಂತ್ರಿಯನ್ನು ಕೇಳು. ನನ್ನ ಬಳಿ ಹೆಚ್ಚು ಮಾತನಾಡಬಾರದು’ ಎಂದು ಗದರಿದ್ದಾರೆ.

ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ವೃದ್ಧೆ, ‘ನನಗೆ ಅವರು ಯಾರೂ ಪರಿಚಯವಿಲ್ಲ’ ಎಂದಿದ್ದಾರೆ. 

‘ಹಾಗಿದ್ದರೆ ನೀನು ನನ್ನ ಮೇಲೆ ಆರೋಪ ಮಾಡುವೆಯಾ. ನಾನು ಈ ದೇಶಕ್ಕೆ ಮಂತ್ರಿ’ ಎಂದು ಗೋಪಿ ಹೇಳುವ ವಿಡಿಯೊ ಹರಿದಾಡಿದೆ.

ಮಂತ್ರಿಯ ಹೇಳಿಕೆಗೆ ವೃದ್ಧ ಮಹಿಳೆ ಪ್ರತಿಕ್ರಿಯಿಸಿ, ‘ಇವರ ಸಿನಿಮಾಗಳನ್ನು ನೋಡಿರುವ ನನಗೆ ಅವರಿಂದ ಏನಾದರೂ ಸಹಾಯ ಆಗಬಹುದು ಎಂದೆನಿಸಿತ್ತು. ಆದರೆ ಇಂಥ ಮಾತುಗಳನ್ನು ಅವರಿಂದ ನಿರೀಕ್ಷಿಸಿರಲಿಲ್ಲ. ಅರ್ಜಿ ಸ್ವೀಕರಿಸಿ, ನೋಡುತ್ತೇನೆ ಎಂದಷ್ಟೇ ಹೇಳಿದ್ದರೂ ಸಾಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಭಾಷಣ ಮಾಡಿದ್ದ ಬಿಜೆಪಿಯ ಸಂಸದ ಸುರೇಶ್ ಗೋಪಿ, ‘ಕರುವಣ್ಣೂರ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದವರ ಹಣ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ಅವರ ಬಳಿ ಸಹಾಯ ಕೇಳಿ ಬಂದಿದ್ದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.