ADVERTISEMENT

ವೈಯಕ್ತಿಕ ಆಕಾಂಕ್ಷೆ ತಪ್ಪಲ್ಲ, ಪಕ್ಷದ ಶಿಸ್ತಿಗೆ ಎಲ್ಲರೂ ಬದ್ಧ: ಸುರ್ಜೇವಾಲಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 21:06 IST
Last Updated 21 ಡಿಸೆಂಬರ್ 2020, 21:06 IST
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ   

ನವದೆಹಲಿ: ವೈಯಕ್ತಿಕ ಆಕಾಂಕ್ಷೆಗಳನ್ನು ಹೊಂದುವುದು ತಪ್ಪೇನೂ ಅಲ್ಲ,ಆದರೆ ಎಲ್ಲರೂ ಪಕ್ಷದ ಶಿಸ್ತಿಗೆ ಬದ್ಧರಾಗಿರಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಘಟಕದೊಳಗಿನ ಗುಂಪುಗಾರಿಕೆಗೆ ಸಂಬಂಧಿಸಿ ಅವರು ಹೀಗೆ ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಭಿನ್ನಮತವಿದೆ ಎಂಬುದಕ್ಕೆ ಸಂಬಂಧಿಸಿ ಈ ಹೇಳಿಕೆ ಬಂದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಪಕ್ಷದ ಒಳಗಿನ ಒಂದು ಗುಂಪೇ ಕಾರಣ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಪಕ್ಷವು ಒಗ್ಗಟ್ಟಾಗಿ ಎದುರಿಸಲಿದೆ. ಅತ್ಯುತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕಾಗಿಎಂ.ಬಿ. ಪಾಟೀಲ್‌ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಸಮಾಲೋಚನೆ ನಡೆಸುತ್ತಿದ್ದಾರೆ. ರಾಜ್ಯದ ಮುಖಂಡರು ಸಭೆ ಸೇರಿ ಶೀಘ್ರದಲ್ಲಿಯೇ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ. ‘ಮುಖ್ಯಮಂತ್ರಿಯ ಕುಟುಂಬ ಸದಸ್ಯರ ಭ್ರಷ್ಟಾಚಾರ ಕಣ್ಣಿಗೆ ರಾಚುವಂತಿದೆ. ಕರ್ನಾಟಕದ ಬಿಜೆಪಿ ಸಾವಿರ ಗುಂಪುಗಳಾಗಿ ಒಡೆದಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರವು ತನ್ನ ಭಾರಕ್ಕೆ ತಾನೇ ಕುಸಿಯಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.