ADVERTISEMENT

'ಮಸಾಜ್ & ಸ್ಪಾ ಕಂಪನಿ ಸಮೀಕ್ಷೆ': BJPಗೆ ಅಧಿಕಾರ ನೀಡಿದ Exit Poll ಕುಟುಕಿದ AAP

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 12:45 IST
Last Updated 6 ಫೆಬ್ರುವರಿ 2025, 12:45 IST
<div class="paragraphs"><p>ಸಂಜಯ್ ಸಿಂಗ್</p></div>

ಸಂಜಯ್ ಸಿಂಗ್

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿರುವ ಬಹುತೇಕ ಸಂಸ್ಥೆಗಳು ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಎಎಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರು, ಅವನ್ನೆಲ್ಲ ಅಲ್ಲಗಳೆದಿದ್ದಾರೆ. ಕೇಸರಿ ಪಕ್ಷಕ್ಕೆ ಅಧಿಕಾರ ನೀಡಿರುವ ಎಕ್ಸಿಟ್‌ ಪೋಲ್‌ ಲೆಕ್ಕಾಚಾರವನ್ನು, 'ಮಸಾಜ್‌ ಮತ್ತು ಸ್ಪಾ ಕಂಪನಿಗಳ ಸಮೀಕ್ಷೆಗಳು' ಎಂದು ಗುರುವಾರ ಕುಟುಕಿದ್ದಾರೆ.

ADVERTISEMENT

ಪಿಟಿಐ ಜೊತೆ ಮಾತನಾಡಿರುವ ಸಿಂಗ್‌, 'ಮಸಾಜ್‌ ಮತ್ತು ಸ್ಪಾ ಕಂಪನಿಗಳು ನಡೆಸಿದ ಸಮೀಕ್ಷೆಗಳಿಂದ ಏನನ್ನು ನಿರೀಕ್ಷಿಸುವಿರಿ? ಫೆಬ್ರುವರಿ 8ರ ವರೆಗೆ ಕಾಯಿರಿ ಮತ್ತು ಎಎಪಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ, ವಿದ್ಯುತ್‌, ನೀರು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಉಪಕ್ರಮಗಳನ್ನೊಳಗೊಂಡ ಎಎಪಿ ಆಡಳಿತ ಮಾದರಿಯನ್ನು ಜನರು ಮೆಚ್ಚಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

'ಮಹಿಳೆಯರಿಗೆ ₹ 2,100 ಹಾಗೂ ವೃದ್ಧರಿಗೆ ಸಂಜೀವಿನಿ ಯೋಜನೆ ಸೇರಿದಂತೆ ನಮ್ಮ ಭರವಸೆಗಳಲ್ಲಿ ಚುನಾವಣಾ ಫಲಿತಾಂಶವು ಪ್ರತಿಫಲಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಎಂಬುದು ಈ ಹಿಂದೆಯೂ ಸಾಬೀತಾಗಿದೆ' ಎಂದು ವಿಶ್ವಾಸದಿಂದ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಸರ್ಕಾರ ರಚಿಸಲು ಎಎಪಿ ಹಾಗೂ ಬರೋಬ್ಬರಿ 27 ವರ್ಷಗಳ ಬಳಿಕ ಅಧಿಕಾರಕ್ಕೇರಲು ಬಿಜೆಪಿ ಭಾರಿ ಕಸರತ್ತು ನಡೆಸಿವೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ನಿನ್ನೆಯಷ್ಟೇ (ಬುಧವಾರ) ಮತದಾನ ನಡೆದಿದೆ. ಸಂಜೆ 5ಕ್ಕೆ ಮತದಾನ ಮುಗಿಯುತ್ತಿದ್ದಂತೆ, ಪ್ರಕಟವಾದ ಬಹುತೇಕ ಸಮೀಕ್ಷೆಗಳು ಬಿಜೆಪಿ ಸರ್ಕಾರ ರಚಿಸಲಿದೆ, ಅಧಿಕಾರದಲ್ಲಿ ಮುಂದುವರಿಯುವ ಎಎಪಿ ಕನಸು ಕಮರಲಿದೆ. ಕಾಂಗ್ರೆಸ್‌ ಪಕ್ಷದ ಸಾಧನೆ ಮತ್ತೊಮ್ಮೆ 'ಶೂನ್ಯ' ಎಂದು ಹೇಳಿವೆ.

ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.