ADVERTISEMENT

ರಾಜ್ಯಸಭಾ ಸಂಸದರ ಅಮಾನತು: ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ-ಮಾಯಾವತಿ

ಪಿಟಿಐ
Published 30 ನವೆಂಬರ್ 2021, 7:58 IST
Last Updated 30 ನವೆಂಬರ್ 2021, 7:58 IST
ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ
ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ   

ಲಖನೌ: ರಾಜ್ಯಸಭೆಯ ಪ್ರತಿಪಕ್ಷದ 12 ಸಂಸದರನ್ನು ಅಮಾನತು ಮಾಡಿರುವ ವಿಚಾರವನ್ನು ಸರ್ಕಾರವು ಮಾತುಕತೆ ಮೂಲಕ ಬಗೆಹರಿಸಬೇಕು ಮತ್ತು ಆ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಳ್ಳಬಾರದು ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಮಂಗಳವಾರ ತಿಳಿಸಿದ್ದಾರೆ.

ಕಳೆದ ಮುಂಗಾರು ಅಧಿವೇಶನದ ಅವಧಿಯಲ್ಲಿ ಅನುಚಿತ, ಅಶಿಸ್ತಿನ ವರ್ತನೆ ಪ್ರದರ್ಶಿಸಿದ ಕಾರಣಕ್ಕಾಗಿ ರಾಜ್ಯಸಭೆಯ ಕಾಂಗ್ರೆಸ್ ಸಂಸದೆ ಛಾಯಾ ವರ್ಮಾ, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಮತ್ತು ಟಿಎಂಸಿಯ ಡೋಲಾ ಸೇನ್ ಸೇರಿದಂತೆ ಹನ್ನೆರಡು ಪ್ರತಿಪಕ್ಷ ಸದಸ್ಯರನ್ನು ಸೋಮವಾರ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಅಮಾನತು ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ವಿಚಾರದ ಬಗ್ಗೆ ಸರ್ಕಾರವು ಕಠಿಣ ನಿಲುವನ್ನು ಕೈಗೊಳ್ಳಬಾರದು ಮತ್ತು ಮಾತಕತೆಯ ಮೂಲಕವೇ ಇದನ್ನು ಬಗೆಹರಿಸಿಕೊಳ್ಳಬೇಕು. ಈ ವಿಚಾರವು ಕಳೆದ ಮುಂಗಾರು ಅಧಿವೇಶನಕ್ಕೆ ಸಂಬಂಧಿಸಿದ್ದು ಮತ್ತು ಈಗ ಚಳಿಗಾಲದ ಅಧಿವೇಶನ ನಡೆಯುತ್ತಿದೆ' ಎಂದು ಹೇಳಿದರು.

ADVERTISEMENT

ಸಂಸದರ ಅಮಾನತು 'ಅನಗತ್ಯ ಮತ್ತು ಪ್ರಜಾಪ್ರಭುತ್ವ ವಿರೋಧಿ' ಎಂದು ಬಣ್ಣಿಸಿರುವ ಪ್ರತಿಪಕ್ಷ ನಾಯಕರು, ಈ ಕ್ರಮವು ಮೇಲ್ಮನೆಯ ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿದೆ' ಎಂದು ಆರೋಪಿಸಿದರು.

ಅಮಾನತುಗೊಂಡವರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು, ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.