ADVERTISEMENT

ತಮಿಳುನಾಡು | ಬಿಜೆಪಿಯಿಂದ ಕರಾಳ ದಿನಾಚರಣೆ: ಅಣ್ಣಾಮಲೈ ಸೇರಿ RSS ಮುಖಂಡರ ಬಂಧನ

ಪಿಟಿಐ
Published 21 ಡಿಸೆಂಬರ್ 2024, 1:58 IST
Last Updated 21 ಡಿಸೆಂಬರ್ 2024, 1:58 IST
<div class="paragraphs"><p>ಅಣ್ಣಾಮಲೈ</p></div>

ಅಣ್ಣಾಮಲೈ

   

ಕೊಯಮತ್ತೂರು (ತಮಿಳುನಾಡು): ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರವು ಕೊಯಮತ್ತೂರು ಬಾಂಬ್ ಸ್ಫೋಟದ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಕರಾಳ ದಿನ ಆಚರಿಸಲಾಗಿದೆ. ಇದೇ ವೇಳೆ ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಸೇರಿದಂತೆ ಹಿಂದೂ ಸಂಘಟನೆಗಳ ಹಲವರು ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ, ರಾಜ್ಯ ಸರ್ಕಾರದ ವಿರುದ್ಧ ಬ್ಯಾನರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.

ADVERTISEMENT

ರ್‍ಯಾಲಿ ನಡೆಸಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘1998ರಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 58 ಜನರ ಸಾವಿಗೆ ಕಾರಣವಾದ ‘ಭಯೋತ್ಪಾದಕನ ವೈಭವೀಕರಣ’ವನ್ನು ಖಂಡಿಸಿ ರ್‍ಯಾಲಿ ನಡೆಸಿದ ತಮಿಳುನಾಡಿನ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ಡಿಎಂಕೆ ಸರ್ಕಾರದ ಹೇಡಿತನದ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಕಾರ್ಯಕರ್ತರು ಇಂತಹ ನಿರಂಕುಶಾಧಿಕಾರಕ್ಕೆ ಎಂದಿಗೂ ತಲೆಬಾಗುವುದಿಲ್ಲ ಎಂಬುದನ್ನು ಡಿಎಂಕೆ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕೊಯಮತ್ತೂರು ಶಾಂತಿ ಪ್ರೀತಿಯ ನಗರವಾಗಿದೆ. ನಾವು ಯಾವಾಗಲೂ ರಾಜ್ಯದ ಜನರ ಧ್ವನಿಯಾಗಿರುತ್ತೇವೆ’ ಎಂದು ಅಣ್ಣಾಮಲೈ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಷೇಧಿತ ಅಲ್‌–ಉಮ್ಮಾ ಸಂಘಟನೆಯ ಅಧ್ಯಕ್ಷ ಎಸ್.ಎ. ಬಾಷಾ ಅವರ ಪಾರ್ಥಿವ ಶರೀರದ ಮೆರವಣಿಗೆಗೆ ಪೊಲೀಸ್ ರಕ್ಷಣೆಯೊಂದಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಖಂಡನೀಯ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

1998ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಬಾಷಾ ಅವರು ಪೆರೋಲ್‌ನಲ್ಲಿದ್ದಾಗ ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.