ADVERTISEMENT

ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹5000: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌

ಪಿಟಿಐ
Published 13 ಫೆಬ್ರುವರಿ 2026, 15:45 IST
Last Updated 13 ಫೆಬ್ರುವರಿ 2026, 15:45 IST
   

ಚೆನ್ನೈ: ತಮಿಳುನಾಡು ಸರ್ಕಾರವು 'ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ'ಯಡಿ ರಾಜ್ಯದ‌ 1.31 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗೆ ತಲಾ ₹5,000 ಜಮಾ ಮಾಡಲಾಗಿದೆಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಮರಳಿದರೆ, ಈಗ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಅನುದಾನವನ್ನು ದ್ಡಿಗುಣಗೊಳಿಸುವುದಾಗಿಯೂ ಮುಖ್ಯಮಂತ್ರಿ ಘೋಷಿಸಿದರು.

‘ಸರ್ಕಾರ ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿರುವ ₹1000 ಆರ್ಥಿಕ ಸೌಲಭ್ಯವನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಅದನ್ನು ಎದುರಿಸುವುದಕ್ಕಾಗಿಯೇ ಫೆಬ್ರವರಿಯಿಂದ ಮೂರು ತಿಂಗಳವರೆಗಿನ ಮೊತ್ತ ಮತ್ತು ಬೇಸಿಗೆ ಅವಧಿಯ ಖರ್ಚು–ವೆಚ್ಚಗಳನ್ನು ಭರಿಸಲು ₹2,000 ನೀಡಲು ನಿರ್ಧರಿಸಲಾಯಿತು’ ಎಂದು ಸ್ಟಾಲಿನ್ ತಮ್ಮ ಅಧಿಕೃತ ‘ಎಕ್ಸ್‌’ನಲ್ಲಿ ವಿಡಿಯೊ ಸಂದೇಶವನ್ನು ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆಯ ಪ್ರತಿ ಮಹಿಳಾ ಫಲಾನುಭವಿ ಖಾತೆಗೆ ₹ 5 ಸಾವಿರ ಜಮೆ ಮಾಡಲಾಗಿದೆ. ಕೆಲವರು(ಪಟ್ಟಭದ್ರ ಹಿತಾಸಕ್ತಿಗಳು) ಮುಂದಿನ ಚುನಾವಣೆಯನ್ನು ನೆಪವಾಗಿಸಿ, ಈ ಯೋಜನೆಯನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದರು. ಅದನ್ನು ಗಮನಿಸಿಯೇ, ಈ ಹಣ ವರ್ಗಾಯಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದು ಹೇಳಿದರು. 

‘ಹಲವು ಟೀಕೆಗಳ ಹೊರತಾಗಿಯೂ, ತಮಿಳುನಾಡು ಸರ್ಕಾರ 2023ರ ಸೆಪ್ಟೆಂಬರ್‌ನಿಂದ ಕಲೈನಾರ್‌ ಮಹಿಳಾ ಹಕ್ಕುಗಳ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹1000 ಆರ್ಥಿಕ ನೆರವು ನೀಡುವುದನ್ನು ಯಶಸ್ವಿಯಾಗಿ ಜಾರಿಗೆ ತಂದಿತು. ಆರಂಭದಲ್ಲಿ 1.13 ಕೋಟಿ ಮಹಿಳೆಯರಿಗೆ ಈ ಯೋಜನೆಯನ್ನು ತಲುಪಿಸಲಾಯಿತು. ನಂತರ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿ(ಮಹಿಳಾ ಮುಖ್ಯಸ್ಥರು)ಯನ್ನು ಸೇರಿಸಿಕೊಳ್ಳುವ ಮೂಲಕ ಯೋಜನೆ ವಿಸ್ತರಿಸಲಾಯಿತು. ಪ್ರಸ್ತುತ ಈ ಯೋಜನೆಯಲ್ಲಿ 1.31 ಕೋಟಿ ಫಲಾನುಭವಿಗಳಿದ್ದಾರೆ.

ವಿಧಾನಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಂತೆ ಡಿಎಂಕೆ ಸರ್ಕಾರ ಘೋಷಿಸಿರುವ ಯೋಜನೆಯನ್ನು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಘೋಷಣೆಯನ್ನು ಖಂಡಿಸಿರುವ ಬಿಜೆಪಿ ನಾಯಕಿ ಮತ್ತು ಮಾಜಿ ರಾಜ್ಯಪಾಲರಾದ ಡಾ. ತಮಿಳ್‌ ಇಸೈ ಸೌಂದರರಾಜನ್‌, ‘ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ’ ಎಂದು ಹೇಳಿದರು.

‘ಡಿಎಂಕೆ ಸರ್ಕಾರ ಪ್ರತಿ ಮಹಿಳೆಗೆ ₹ 50,000  ನೀಡಿದರೂ, ಚುನಾವಣೆಯಲ್ಲಿ ಸೋಲುವುದು ಖಚಿತ’ ಎಂದು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ ದಿನಕರನ್ ಹೇಳಿದರು.

‘ಈ ಘೋಷಣೆಗಳು ಮುಖ್ಯಮಂತ್ರಿಯವರ ಚುನಾವಣಾ ಸೋಲಿನ ಭಯವನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಕ್ಕೆ ಬಂದ 28 ತಿಂಗಳ ನಂತರವೂ ಈ ಯೋಜನೆ ಜಾರಿಗೆ ತರದ ಸರ್ಕಾರ ಈಗ ಮೂರು ತಿಂಗಳ ಮೊತ್ತದೊಂದಿಗೆ ಬೇಸಿಗೆಯ ವಿಶೇಷ ಅನುದಾನ ನೀಡುತ್ತಿದೆ. ಮಹಿಳೆಯರು ಹೀಗೆ ತೇಪೆ ಹಾಕುವುದನ್ನು ಒಪ್ಪುವುದಿಲ್ಲ’  –ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖ್ಯಮಂತ್ರಿಯವರು ಈ ವರ್ಷ ₹2000 ವಿಶೇಷ ಅನುದಾನ ಘೋಷಿಸಿದ್ದಾರೆ. ಅಂದರೆ ಬೇಸಿಗೆ ಈ ವರ್ಷ ಮಾತ್ರ ಬಂದಿದಿಯೇ?
ವಿಜಯ್, ನಟ-ರಾಜಕಾರಣಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.