
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸ್ಪರ್ಧಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ರಾಜಕೀಯ ಸನ್ನಿವೇಶ ಬದಲಾಗುತ್ತಿದೆ ಎಂದು ನಟ ಹಾಗೂ ರಾಜಕಾರಣಿ ವಿಜಯ್ ಅವರು ಸೋಮವಾರ ಹೇಳಿದ್ದಾರೆ.
2026ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
‘ಟಿವಿಕೆ’ಗೆ ಅಭೂತಪೂರ್ವ ಜನಬೆಂಬಲ ದೊರೆಯುತ್ತಿದೆ. ಪಕ್ಷದ ಕಾರ್ಯಕರ್ತರು ದೃಢಸಂಕಲ್ಪ ಮತ್ತು ಏಕತೆಯಿಂದ ಚುನಾವಣೆಯನ್ನು ಎದುರಿಸೋಣ. ಆ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಕವೇ ಅಧಿಕಾರದ ಗುರಿಯನ್ನು ತಲುಪೋಣ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಜಯ್, ‘ಟಿವಿಕೆ ಸ್ಥಾಪನೆಯಾಗಿ ಎರಡು ವರ್ಷ ಕಳೆದಿದೆ. ಇಂದಿನಿಂದ ಮೂರನೇ ವರ್ಷಕ್ಕೆ ಕಾಲಿಡಲಿದ್ದೇವೆ. ನಮ್ಮ ರಾಜಕೀಯ ಪಯಣ ಇನ್ನೂ ಮುಂದುವರೆಯಲಿದೆ’ ಎಂದು ತಿಳಿಸಿದ್ದಾರೆ.
ಟಿವಿಕೆ ಪಕ್ಷವು ಆಳ ಸಮುದ್ರವಿದ್ದಂತೆ. ಅದು ರಾಜಕೀಯ ಪಯಣದಲ್ಲಿ ಯಾವತ್ತೂ ತನ್ನ ಗುರಿಯನ್ನು ಬಿಟ್ಟು ಕಳೆದುಹೋಗುವುದಿಲ್ಲ. ಅಡತಡೆಗಳನ್ನು ಹಿಮ್ಮೆಟ್ಟಿಸಿ ನಿಲ್ಲುತ್ತದೆ. ಅಧಿಕಾರಕ್ಕಾಗಿ ಕಚ್ಚಾಡುವವರ ನಡುವೆ ಜನಸಾಮಾನ್ಯರಿಗಾಗಿ ಪಕ್ಷವು ಕೆಲಸ ಮಾಡುತ್ತದೆ. 2026ರ ಚುನಾವಣೆಯಲ್ಲಿ ಈ ಹಿಂದೆ ಕಾರಣ ಹೊಸ ರಾಜಕೀಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.
2024ರ ಫೆ.2ರಂದು ನಟ ವಿಜಯ್ ಅವರು ಟಿವಿಕೆ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕಾರಣಕ್ಕೆ ಕಾಲಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.