
ತಮಿಳುನಾಡಿನ ವಿಧಾನಸಭೆಯಲ್ಲಿ ಆರ್.ಎನ್.ರವಿ
(ಪಿಟಿಐ ಸಂಗ್ರಹ ಚಿತ್ರ)
ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯದಲ್ಲಿ ತಪ್ಪುಗಳು ಇದ್ದ ಕಾರಣ ರಾಜ್ಯಪಾಲ ಆರ್.ಎನ್.ರವಿ ಅವರು ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರ ನಡೆದರು ಎಂದು ಲೋಕಭವನ ತಿಳಿಸಿದೆ.
ಸದನವನ್ನು ಉದ್ದೇಶಿಸಿ ವಾಡಿಕೆಯಂತೆ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದರೆ ಅವರು ವಿಧಾನಸಭೆಯಿಂದ ಹೊರ ನಡೆದಿದ್ದಾರೆ. ಇದರೊಂದಿಗೆ ಸತತ ಮೂರನೇ ವರ್ಷವೂ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಲು ನಿರಾಕರಿಸಿದ್ದಾರೆ.
ಸದನದಿಂದ ಹೊರಬಂದ ಕೆಲವೇ ಹೊತ್ತಿನಲ್ಲಿ, ರಾಜ್ಯಪಾಲರು ತಮ್ಮ ಭಾಷಣವನ್ನು ನಿರಾಕರಿಸಲು ಕಾರಣವೇನು ಎಂಬುವುದರ 13 ಅಂಶಗಳನ್ನೊಂಡ ವಿವರಣೆಯನ್ನು ಲೋಕಭವನ ನೀಡಿದೆ.
ರಾಜ್ಯಪಾಲರ ಮೈಕ್ ಅನ್ನು ಪದೇ ಪದೇ ಆಫ್ ಮಾಡಲಾಗುತ್ತಿತ್ತು. ಅವರ ಮಾತಿಗೆ ಅವಕಾಶ ನೀಡಲಿಲ್ಲ. ಆಧಾರ ರಹಿತ ಹೇಳಿಕೆಗಳು, ಸತ್ಯಕ್ಕೆ ದೂರವಾದ ಮಾತುಗಳು ಭಾಷಣದ ಪಠ್ಯದಲ್ಲಿದ್ದವು. ಇವು ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳಾಗಿದ್ದವು ಎಂದು ಲೋಕಭವನ ತಿಳಿಸಿದೆ.
'ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ' ಎಂದು ಆರ್.ಎನ್.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಅಧಿವೇಶನದಿಂದ ರಾಜ್ಯಪಾಲ ಆರ್.ಎನ್.ರವಿ ಅವರ ಹೊರನಡೆದಿರುವ ನಡೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಟೀಕಿಸಿದ್ದಾರೆ. ಸಾಂಪ್ರದಾಯವನ್ನು ಉಲ್ಲಂಘಿಸಿ ರಾಜ್ಯಪಾಲರು ಹೊರನಡೆದಿದ್ದಾರೆ' ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.