ADVERTISEMENT

ಪೈಥಾನ್‌–5 ಕ್ಷಿಪಣಿ ಕೊಂಡೊಯ್ಯಲು ತೇಜಸ್‌ಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 14:49 IST
Last Updated 28 ಏಪ್ರಿಲ್ 2021, 14:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ತೇಜಸ್‌ ಇನ್ನು ಮುಂದೆ ಪೈಥಾನ್‌–5 ಕ್ಷಿಪಣಿಯನ್ನು ಕೊಂಡೊಯ್ಯಲಿದೆ.

5ನೇ ಪೀಳಿಗೆಯ ಪೈಥಾನ್‌–5 ಶಸ್ತ್ರಾಸ್ತ್ರ ಕ್ಷಿಪಣಿಯನ್ನು ಆಕಾಶದಿಂದ ಆಕಾಶಕ್ಕೆ ಚಿಮ್ಮಿಸಬಹುದಾಗಿದೆ. ಈ ಕ್ಷಿಪಣಿಯನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಿರುವುದರಿಂದ ತೇಜಸ್‌ನ ಸಾಮರ್ಥ್ಯ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದಲ್ಲಿ ಯುದ್ಧ ವಿಮಾನದ ಸಾಮರ್ಥ್ಯದ ಬಗ್ಗೆ ಸರಣಿ ಪರೀಕ್ಷೆಗಳನ್ನು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಲವು ಕಠಿಣ ಸವಾಲುಗಳನ್ನು ಎದುರಿಸುವ ಸನ್ನಿವೇಶವನ್ನು ಸೃಷ್ಟಿಸಿ ಪರೀಕ್ಷೆಗಳನ್ನು ಕೈಗೊಳ್ಳಲಾಗಿತ್ತು. ಪೈಥಾನ್‌ ಕ್ಷಿಪಣಿಯ ಪರೀಕ್ಷೆಯ ಸಂದರ್ಭದಲ್ಲಿ ಶೇಕಡ 100ರಷ್ಟು ಫಲಿತಾಂಶ ದೊರೆತಿದೆ ಎಂದು ವಿವರಿಸಿದ್ದಾರೆ.

ADVERTISEMENT

ಈ ಪ್ರಯೋಗಗಳ ಮುನ್ನ, ಬೆಂಗಳೂರಿನಲ್ಲಿಯೂ ವಿಸ್ತೃತವಾಗಿ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ತೇಜಸ್‌ ಯುದ್ಧವಿಮಾನದ ವ್ಯವಸ್ಥೆಯ ಜತೆಗೆ ಕ್ಷಿಪಣಿಗಳನ್ನು ಸಮ್ಮಿಲನಗೊಳಿಸುವ ಕಾರ್ಯದ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

ವಿವಿಧ ನಿರ್ದಿಷ್ಟ ಸ್ಥಳಗಳಿಂದಲೂ ಪೈಥಾನ್‌–5 ಕ್ಷಿಪಣಿಯ ಪ್ರಾಯೋಗಿಕ ದಾಳಿ ನಡೆಸಲಾಗಿತ್ತು. ಜತೆಗೆ, ದೃಷ್ಟಿ ಮೀರುವ ಸ್ಥಳಗಳಿಗೂ ಗುರಿ ನಿಗದಿಪಡಿಸಲಾಗಿತ್ತು. ಈ ಎಲ್ಲ ದಾಳಿಗಳಲ್ಲೂ ಕ್ಷಿಪಣಿಯು ವೈಮಾನಿಕ ಗುರಿಯನ್ನು ತಲುಪಿದೆ ಎಂದು ತಿಳಿಸಿದ್ದಾರೆ.

ತೇಜಸ್‌ ಯುದ್ಧ ವಿಮಾನವನ್ನು ಹಿಂದೂಸ್ತಾನ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತಯಾರಿಸಿದೆ. ಇದು ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸುವ ಸೂಪರ್‌ಸಾನಿಕ್‌ ಯುದ್ಧ ವಿಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.