
ನವದೆಹಲಿ: ಐಆರ್‌ಸಿಟಿಸಿ ಹಗರಣದಲ್ಲಿ ತನ್ನ ವಿರುದ್ಧ ಆರೋಪ ಹೊರಿಸುವ ಆದೇಶವನ್ನು ಪ್ರಶ್ನಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಮಂಗಳವಾರ ಸೂಚಿಸಿದೆ.
ಸಿಬಿಐಗೆ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜನವರಿ 14ರಂದು ನಿಗದಿಪಡಿಸಿದ್ದಾರೆ. ತೇಜಸ್ವಿ ಅವರ ತಂದೆ ಲಾಲೂ ಪ್ರಸಾದ್ ಅವರ ಇದೇ ರೀತಿಯ ಅರ್ಜಿಯ ವಿಚಾರಣೆ ಕೂಡಾ ಅಂದು ನಡೆಯಲಿದೆ.
ಲಾಲೂ ಅವರ ಅರ್ಜಿಯ ಕುರಿತು ಜನವರಿ 5ರಂದು ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಸಿಬಿಐನ ಉತ್ತರ ಕೋರಿತ್ತು. ಅದಾಗ್ಯೂ, ಸಿಬಿಐನ ಪ್ರತಿಕ್ರಿಯೆಯನ್ನು ಪರಿಶೀಲಿಸದೆ ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
2025ರ ಅಕ್ಟೋಬರ್ 13ರಂದು ವಿಚಾರಣಾ ನ್ಯಾಯಾಲಯವು, ಲಾಲೂ ಪ್ರಸಾದ್, ಅವರ ಪತ್ನಿ ರಾಬ್ಡಿ ದೇವಿ, ಮಗ ತೇಜಸ್ವಿ ಯಾದವ್ ಮತ್ತು ಇತರ 11 ಜನರ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಿತ್ತು.