ADVERTISEMENT

Telangana Election: 237ನೇ ಬಾರಿಗೆ ನಾಮಪತ್ರ ಸಲ್ಲಿಸಿದ ‘ಎಲೆಕ್ಷನ್‌ ಕಿಂಗ್‌’

ಪಿಟಿಐ
Published 6 ನವೆಂಬರ್ 2023, 6:05 IST
Last Updated 6 ನವೆಂಬರ್ 2023, 6:05 IST
<div class="paragraphs"><p>ಕೆ. ಪದ್ಮರಾಜನ್‌</p></div>

ಕೆ. ಪದ್ಮರಾಜನ್‌

   

–ಟ್ವಿಟರ್ ಚಿತ್ರ

ಹೈದರಾಬಾದ್‌: ದೇಶದಲ್ಲಿ ನಡೆದ ವಿವಿಧ ಚುನಾವಣೆಗಳಲ್ಲಿ ಒಟ್ಟು 236 ಬಾರಿ ಸ್ಪರ್ಧಿಸಿ ಸೋತಿದ್ದರೂ ಕುಗ್ಗದ ಕೆ. ಪದ್ಮರಾಜನ್‌ ಅವರು ತೆಲಂಗಾಣದ ಗಜ್ವೇಲ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಚುನಾವಣಾ ಕಣದಲ್ಲಿ ಇರುವುದು ಇದು 237ನೇ ಬಾರಿ.

ADVERTISEMENT

ತಮಿಳುನಾಡಿನ ಪದ್ಮರಾಜನ್ ಅವರು ‘ಎಲೆಕ್ಷನ್‌ ಕಿಂಗ್‌’ (ಚುನಾವಣೆ ಮಹಾರಾಜ) ಎಂದೇ ಪ್ರಸಿದ್ಧರು. ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ. ನರಸಿಂಹರಾವ್‌, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಪ್ರಮುಖರ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ಕಣಕ್ಕಿಳಿದಿದ್ದಾರೆ.

1988ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೆಟ್ಟೂರು ಕ್ಷೇತ್ರದಿಂದ ಅವರು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಳಿಕ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಮತ್ತು ದೆಹಲಿಯ ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ‘2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 6,273 ಮತ ಪಡೆದಿದ್ದೆ. ಇದು ಈವರೆಗೆ ನಾನು ಪಡೆದ ಅತಿಹೆಚ್ಚು ಮತಗಳು. ಕೆಲವು ಪಂಚಾಯಿತಿ ಚುನಾವಣೆಗಳಲ್ಲಿ ಶೂನ್ಯ ಮತ ಸಂಪಾದಿಸಿದ್ದೂ ಇದೆ’ ಎಂದು ಪದ್ಮರಾಜನ್ ಅವರು ಹೇಳಿದ್ದಾರೆ.

ತಾವು ಹೋಮಿಯೋಪತಿ ವೈದ್ಯ ಎಂದು ಹೇಳಿಕೊಳ್ಳುವ ಪದ್ಮರಾಜನ್‌ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸುವ ತಮ್ಮ ಆಸಕ್ತಿಯ ಕಾರಣಕ್ಕಾಗಿ ಈವರೆಗೆ ₹1 ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಿರುವುದಾಗಿ ಹೇಳಿದ್ದಾರೆ. ಆದರೆ, ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಪದ್ಮರಾಜನ್‌ ಎಂಟನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಅಣ್ಣಾಮಲೈ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.