ಪ್ರಧಾನಿ ಮೋದಿ
ನವದೆಹಲಿ: ಪರಿಶಿಷ್ಟ ಜಾತಿಗಳ ವರ್ಗೀಕರಣದ ಬೇಡಿಕೆಗೆ ಸಂಬಂಧಿಸಿದಂತೆ ಮಾದಿಗರ (ಎಸ್‌ಸಿ ಸಮುದಾಯ) ಸಬಲೀಕರಣಕ್ಕಾಗಿ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ಸೇರಿದಂತೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಲಿತರು, ಮಾದಿಗರನ್ನು ಓಲೈಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ.11ರಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ್ದ ಮೋದಿ, ‘ಪರಿಶಿಷ್ಟ ಜಾತಿಗಳ ವರ್ಗೀಕರಣದ ಬೇಡಿಕೆಗೆ ಸಂಬಂಧಿಸಿದಂತೆ ಮಾದಿಗರ (ಎಸ್‌ಸಿ ಸಮುದಾಯ) ಸಬಲೀಕರಣಕ್ಕಾಗಿ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಮಿತಿ ರಚಿಸಲಿದೆ’ ಎಂದು ಭರವಸೆ ನೀಡಿದ್ದರು.
‘ಮೂರು ದಶಕಗಳಿಂದ ಪ್ರತಿಯೊಂದು ಹೋರಾಟದಲ್ಲೂ ಬಿಜೆಪಿ ನಿಮ್ಮೊಂದಿಗೆ ನಿಂತಿದೆ. ಈ ಅನ್ಯಾಯವನ್ನು ಆದಷ್ಟು ಬೇಗ ಕೊನೆಗೊಳಿಸಲು ಬದ್ಧರಾಗಿದ್ದೇವೆ. ನಿಮ್ಮನ್ನು ಸಬಲೀಕರಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಸಮಿತಿಯನ್ನು ಶೀಘ್ರದಲ್ಲೇ ರಚಿಸುತ್ತೇವೆ ಎಂಬ ಭರವಸೆ ನೀಡಲಾಗುವುದು. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂಬುದೂ ನಿಮಗೆ ತಿಳಿದಿದೆ. ನಿಮ್ಮ ಹೋರಾಟ ನ್ಯಾಯಯುತವೆಂದು ಪರಿಗಣಿಸುತ್ತೇವೆ’ ಎಂದು ಅವರು ತಿಳಿಸಿದ್ದರು.
‘ನಾವು ನ್ಯಾಯವನ್ನು ಖಾತರಿಪಡಿಸುತ್ತೇವೆ. ನ್ಯಾಯಾಲಯದಲ್ಲಿಯೂ ನಿಮಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಹೇಳಿದ್ದರು.
119 ಸ್ಥಾನಗಳ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.