
ರೇವಂತ್ ರೆಡ್ಡಿ
ಹೈದರಾಬಾದ್: ಹಿಂದೂ ದೇವತೆಯರ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ, ಬಿಆರ್‌ಎಸ್ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಹೈದರಾಬಾದ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ‘ಮೂರು ಕೋಟಿ ಹಿಂದೂ ದೇವತೆಗಳಿದ್ದಾರೆ. ಪ್ರತಿಯೊಂದು ಸಂದರ್ಭಕ್ಕೂ ಒಬ್ಬ ದೇವರು... ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ?, ಮೂರು ಕೋಟಿ?, ಇಷ್ಟೊಂದು ದೇವರುಗಳು ಏಕೆ?, ಅವಿವಾಹಿತರು ಹನುಮಂತನನ್ನು ದೇವರಾಗಿ ನಂಬುತ್ತಾರೆ. ಎರಡೆರಡು ಮದುವೆಯಾಗುವವರಿಗೆ ಬೇರೆ ದೇವರು ಇರುತ್ತಾರೆ’ ಎಂದು ಹೇಳಿದ್ದರು.
‘ಕುಡುಕರಿಗೆ ಬೇರೆ ದೇವರು ಇರುತ್ತಾರೆ. ಯಲ್ಲಮ್ಮ, ಪೋಚಮ್ಮ, ಮೈಸಮ್ಮ ದೇವತೆಗಳಿಗೆ ಮದ್ಯ ಮತ್ತು ಮಾಂಸಾಹಾರ ಅರ್ಪಿಸುವ ಜನರಿದ್ದಾರೆ. ಬೇಳೆ ಮತ್ತು ಅನ್ನ ತಿನ್ನುವವರಿಗೆ ಬೇರೆ ದೇವರು ಇರುತ್ತಾರೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇರುತ್ತಾರೆ’ ಎಂದು ರೆಡ್ಡಿ ತಿಳಿಸಿದ್ದರು.
‘ದೇವರು ದೇವಾಲಯದಲ್ಲಿ ನೆಲೆಸಿರಬೇಕು ಮತ್ತು ನಂಬಿಕೆ ಮನುಷ್ಯನ ಹೃದಯದಲ್ಲಿರಬೇಕು. ಅಂತಹ ಜನರು ನಿಜವಾದ ಹಿಂದೂಗಳು. ಆದರೆ, ವಿಭಿನ್ನ ಮನಸ್ಥಿತಿ ಹೊಂದಿರುವ ಜನರನ್ನು ಸೆಳೆಯುವ ಮೂಲಕ ಬಿಜೆಪಿ ನಾಯಕರು ಕೇವಲ ಮತಗಳನ್ನು ಗಳಿಸುವ ಸಲುವಾಗಿ ಬೀದಿಗಳಲ್ಲಿ ದೇವರ ಫೋಟೊಗಳನ್ನು ಹಾಕುತ್ತಿದ್ದಾರೆ’ ಎಂದು ಅವರು ಟೀಕಿಸಿದ್ದರು.
ರೇವಂತ್ ರೆಡ್ಡಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರೇವಂತ್ ರೆಡ್ಡಿ ಹೇಳಿಕೆಗಳನ್ನು ವಿರೋಧ ಪಕ್ಷಗಳಾದ ಬಿಜೆಪಿ, ಬಿಆರ್‌ಎಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ರೆಡ್ಡಿ ಅವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.