ADVERTISEMENT

ಅಜರುದ್ದೀನ್ ಪುತ್ರನ ರಾಜಕೀಯ ಪ್ರವೇಶ: ರಾಹುಲ್‌ ಗಾಂಧಿ ಸ್ಫೂರ್ತಿ ಎಂದು ಗುಣಗಾನ

ಪಿಟಿಐ
Published 15 ಜೂನ್ 2025, 5:36 IST
Last Updated 15 ಜೂನ್ 2025, 5:36 IST
   

ಹೈದರಾಬಾದ್: ಇತ್ತೀಚೆಗೆ ತೆಲಂಗಾಣ ಕಾಂಗ್ರೆಸ್‌ನ ಪ್ರಧಾನ ಕಾರ್ಯಾದರ್ಶಿಯಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸಾದುದ್ದೀನ್ ನೇಮಕಗೊಂಡಿದ್ದು, ಈ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ.

ರಾಜಕೀಯ ಪ್ರವೇಶಿಸಲು ತಮ್ಮ ತಂದೆ ಹಾಗೂ ಕಾಂಗ್ರೆಸ್‌ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದ ಮೂಲಕ ಜನರಿಗೆ ಸೇವೆ ಮಾಡುವ ಹಂಬಲವನ್ನು ಅಸಾದುದ್ದೀನ್ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಕೋಲ್ಟ್ಸ್ ಇಲೆವೆನ್ ಮತ್ತು ಗೋವಾ ಸೇರಿದಂತೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ 35 ವರ್ಷದ ಅಸಾದುದ್ದೀನ್, ಪಕ್ಷ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ರಾಹುಲ್ ಗಾಂಧಿಯವರ ಬದ್ಧತೆಯೇ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಈ ಅಂಶವೇ ನನಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪಕ್ಷಕ್ಕಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಕಾಂಗ್ರೆಸ್‌ನ ಮೌಲ್ಯಗಳಿಗಾಗಿ ಹೋರಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಅಸಾದುದ್ದೀನ್ ಶ್ಲಾಘಿಸಿದ್ದಾರೆ.

ಇತ್ತೀಚೆಗೆ ತೆಲಂಗಾಣ ಕಾಂಗ್ರೆಸ್‌ನ ಪ್ರಧಾನ ಕಾರ್ಯಾದರ್ಶಿಯಾಗಿ ಅಸಾದುದ್ದೀನ್ ನೇಮಕಗೊಂಡ ಬಳಿಕ ಮೊಹಮ್ಮದ್ ಅಜರುದ್ದೀನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಅನ್ನು ಹಂಚಿಕೊಂಡಿದ್ದರು.

'ಅಸಾದುದ್ದೀನ್ ಅವರಲ್ಲಿ ಜನರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆ ನಿಟ್ಟಿನಲ್ಲಿ ಅವರ ಸೇವಾ ಮನೋಭಾವ, ಪ್ರಾಮಾಣಿಕತೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಮೌಲ್ಯಯುತವಾದ ಮಾರ್ಗದರ್ಶನ ಪಡೆಯಲಿ. ಜತೆಗೆ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕಾಗಿ ಹಾರೈಸುತ್ತೇನೆ' ಎಂದು ಅಜರುದ್ದೀನ್ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.