
ಬಂಡಿ ಸಂಜಯ ಕುಮಾರ್
ಹೈದರಾಬಾದ್: ‘ಮತಕಳವಿನ’ ಬಗ್ಗೆ ಆರೋಪ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಬಂಡಿ ಸಂಜಯ ಕುಮಾರ್, ‘ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರ ತ್ಯಜಿಸುವ ಮೂಲಕ ಕಾಂಗ್ರೆಸ್ ಪಕ್ಷ ಮಾದರಿ ನಡೆ ಅನುಸರಿಸಲಿ’ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಇಡೀ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
‘ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಚುನಾವಣೆಗಳಲ್ಲಿ ಮತಕಳವು ನಡೆದಿದೆ ಎಂದು ನಂಬಿದರೆ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರವನ್ನು ತ್ಯಜಿಸಿ ಪೂರ್ವನಿದರ್ಶನ ಸ್ಥಾಪಿಸಲಿ. ಏಕೆಂದರೆ, ಯಾವ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡುತ್ತಿರುವಿರಾ, ಅದೇ ಆಯೋಗ ನಡೆಸಿದ ಚುನಾವಣೆಯಲ್ಲಿ ಗೆದ್ದು ಅಲ್ಲಿ ನೀವು ಸರ್ಕಾರ ರಚಿಸಿದ್ದೀರಿ’ ಎಂದು ಹೇಳಿದರು.
‘ನೀವು ಗೆದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಗಳಿ, ಸೋತಾಗ ‘ಮತಕಳವು’ ಎಂದು ಆರೋಪಿಸುವುದು ಸರಿಯಲ್ಲ’ ಎಂದು ಟೀಕಿಸಿದರು.
‘ನಾವು ಸತ್ಯದ ಪರವಾಗಿ ನಿಲ್ಲುತ್ತೇವೆ ಮತ್ತು ನರೇಂದ್ರ ಮೋದಿ-ಆರ್‌ಎಸ್‌ಎಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತು ಹಾಕುತ್ತೇವೆ. ಮತ ಕಳವು ಅವರ ಡಿಎನ್‌ಎಯಲ್ಲೇ ಇದೆ’ ಎಂದು ರಾಹುಲ್ ಗಾಂಧಿ ಅವರು ಭಾನುವಾರ ನವದೆಹಲಿಯಲ್ಲಿ ನಡೆದ ರ್‍ಯಾಲಿಯಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.