
ಮಾವೋವಾದಿ ಶರಣು ಸಾಂದರ್ಭಿಕ ಚಿತ್ರ)
ಹೈದರಾಬಾದ್: ತೆಲಂಗಾಣ ಮೂಲದ ಪ್ರಮುಖ ಮಾವೋವಾದಿ ಕಮಾಂಡರ್ ತಿಪ್ಪಿರಿ ತಿರುಪತಿ ಅಲಿಯಾಸ್ ದೇವಾಜಿ ಭಾನುವಾರ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದಾಗ್ಯೂ ತೆಲಂಗಾಣ ಪೊಲೀಸರು ಅಧಿಕೃತವಾಗಿ ಇನ್ನು ದೃಢಪಡಿಸಿಲ್ಲ.
ದೇವಾಜಿ ಜೊತೆಗೆ ಮತ್ತೊಬ್ಬ ನಾಯಕ ಮಲ್ಲಾ ರಾಜಿ ರೆಡ್ಡಿ ಕೂಡ ತನ್ನ ಸಹಚರರ ಜೊತೆ ಶರಣಾಗಿದ್ದಾರೆ. ಎಷ್ಟು ಜನರು ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಸ್ಥಳೀಯ ಮಾಧ್ಯಮಗಳ ಪ್ರಕಾರ ಇಬ್ಬರು ನಾಯಕರು ಸೇರಿ 27ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇವಾಜಿ ತೆಲಂಗಾಣದ ಜಗ್ತಿಯಾಲ ಜಿಲ್ಲೆಯವರು. ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿ ಸಕ್ರಿಯವಾಗಿದ್ದ ನಿಷೇಧಿತ ಸಿಪಿಐ(ಎಂ) ಸಂಘಟನೆಯ ಮುಖ್ಯಸ್ಥರಾಗಿದ್ದರು. ಕೇಂದ್ರ ಸಮಿತಿ ಹಾಗೂ ಪಾಲಿಟ್‌ಬ್ಯೂರ್‌ದ ಸದಸ್ಯರಾಗಿದ್ದರು.
ದೇಶವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ರಚನೆಗೆ ದೇವಾಜಿ ಕಾರಣರಾಗಿದ್ದರು. ಪೊಲೀಸರು ಇವರ ತಲೆಗೆ ₹1 ಕೋಟಿ ಬಹುಮಾನ ಘೋಷಿಸಿದ್ದರು.
ಇತ್ತೀಚಿನ ದಿನಗಳಲ್ಲಿ ನಕ್ಸಲ್ ಚಳವಳಿ ತ್ಯಜಿಸಿ ಹಲವರು ಶರಣಾಗುತ್ತಿದ್ದಾರೆ. ಅಲ್ಲದೆ ಸಂಘಟನೆಗೆ ಯುವಕರು ಸೇರುತ್ತಿಲ್ಲವಾದ್ದರಿಂದ ಸಂಘಟನೆಯ ಶಕ್ತಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ನಾಯಕರು ಸೇರಿದಂತೆ ಕಾರ್ಯಕರ್ತರು ಶರಣಾಗುತ್ತಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.