
ಹೈದರಾಬಾದ್: ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವುದಕ್ಕಾಗಿ ಅಮಾನವೀಯ ಕೃತ್ಯ ನಡೆಸಿದ ಜನಪ್ರತಿನಿಧಿಗಳ ವಿರುದ್ಧ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದೆ.
2025ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳು, 'ಬೀದಿನಾಯಿಗಳ ಹಾವಳಿ' ತಪ್ಪಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಸರಪಂಚ್‌ಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ನಾಯಿಗಳ ಹತ್ಯೆಗೆ ಮುಂದಾಗಿದ್ದಾರೆ.
ಅದರಂತೆ, ಕಾಮರೆಡ್ಡಿ ಜಿಲ್ಲೆಯಲ್ಲಿ ಸುಮಾರು 200 ಬೀದಿನಾಯಿಗಳನ್ನು ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಐದು ಗ್ರಾಮಗಳ ಸರಪಂಚ್‌ಗಳು ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹನುಮಗೊಂಡ ಜಿಲ್ಲೆಯ ಶಾಯಂಪೇಟ್ ಹಾಗೂ ಅರೆಪಲ್ಲಿ ಗ್ರಾಮಗಳಲ್ಲಿ 300 ಬೀದಿನಾಯಿಗಳನ್ನು ಹತ್ಯೆ ಮಾಡಿದ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು.
'ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ, ಬೀದಿನಾಯಿ ಹಾಗೂ ಕೋತಿಗಳ ಹಾವಳಿಯನ್ನು ತಪ್ಪಿಸುವುದಾಗಿ ಕೆಲವು ಅಭ್ಯರ್ಥಿಗಳು ಆಶ್ವಾಸನೆ ನೀಡಿದ್ದರು. ಇದೀಗ ಅವರೆಲ್ಲ, ಭರವಸೆಗಳನ್ನು ಈಡೇರಿಸುತ್ತಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ನಾಯಿಗಳಿಗೆ ವಿಷಕಾರಿ ಇಂಜೆಕ್ಷನ್!
ನಾಯಿ ಹತ್ಯೆಗೆ ಸಂಬಂಧಿಸಿದಂತೆ ಪ್ರಾಣಿ ಕಲ್ಯಾಣ ಹೋರಾಟಗಾರ ಅದುಲಪುರಂ ಗೌತಮ್ ಎಂಬವರು ಸೋಮವಾರ ದೂರು ನೀಡಿದ್ದರು. 'ಕಾಮರೆಡ್ಡಿ ಜಿಲ್ಲೆಯ ಪಲ್ವಾಂಚ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಲ್ಲಿ ಸುಮಾರು 200 ಬೀದಿನಾಯಿಗಳನ್ನು ಹತ್ಯೆ ಮಾಡಲಾಗಿದೆ' ಎಂದು ಉಲ್ಲೇಖಿಸಿದ್ದರು.
ಐದು ಗ್ರಾಮಗಳ ಸರಂಪಚ್‌ಗಳ ಸೂಚನೆಯಂತೆ ನಾಯಿಗಳನ್ನು ಕೊಲ್ಲಲಾಗಿದೆ. ಅದಕ್ಕಾಗಿ, ವಿಷಯುಕ್ತ ಇಂಜೆಕ್ಷನ್ ನೀಡಲು ವ್ಯಕ್ತಿಯೊಬ್ಬರು ನೇಮಿಸಿಕೊಳ್ಳಲಾಗಿದೆ ಎಂದು ದೂರಿದ್ದರು.
ಭವಾನಿಪೇಟ್ ಗ್ರಾಮದಲ್ಲಿ ನಾಯಿಗಳ ಶವಗಳನ್ನು ಎಸೆದಿರುವುದು ಕಂಡು ಬಂದಿತ್ತು. ನಂತರ, ಪಲ್ವಾಂಚ, ಫರೀದ್‌ಪೇಟ್, ವಾಡಿ ಮತ್ತು ಬಂಡರಾಮೇಶ್ವರ ಗ್ರಾಮಗಳಲ್ಲಿಯೂ ಇದೇ ರೀತಿ ಕ್ರೌರ್ಯ ಮೆರೆದಿರುವುದು ಗೊತ್ತಾಯಿತು ಎಂದೂ ಮಾಹಿತಿ ನೀಡಿದ್ದರು.
ದೇಹಗಳನ್ನು ಹೊರತೆಗೆದು ಶವಪರೀಕ್ಷೆ
ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹತ್ಯೆ ಮಾಡಿರುವ ಎಲ್ಲ ನಾಯಿಗಳನ್ನು ಗ್ರಾಮಗಳ ಹೊರವಲಯಗಳಲ್ಲಿ ಗುಂಡಿ ತೆಗೆದು ಹೂಳಲಾಗಿತ್ತು. ಇದೀಗ, ಪಶು ವೈದ್ಯಕೀಯ ತಂಡಗಳು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿವೆ. ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ತೀರ್ಪು
ಬೀದಿನಾಯಿ ಹಾವಳಿ ತಡೆಗಾಗಿ ರೂಪಿಸಲಾಗಿರುವ ನಿಯಮಗಳು ಕಳೆದ ಐದು ವರ್ಷಗಳಿಂದ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರವಷ್ಟೇ ಕಳವಳ ವ್ಯಕ್ತಪಡಿಸಿದೆ.
ಬೀದಿನಾಯಿ ಹಾವಳಿಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರ ನೇತೃತ್ವದ ನ್ಯಾಯಪೀಠವು, 'ನಾಯಿ ಕಡಿತದಿಂದ ಜನರಿಗೆ ಗಾಯವಾದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ರಾಜ್ಯ ಸರ್ಕಾರಗಳಿಂದ ಭಾರಿ ಪರಿಹಾರ ಕೇಳಬೇಕಾಗುತ್ತದೆ. ಅಂಥ ಪ್ರಕರಣಗಳಲ್ಲಿ ನಾಯಿಗಳಿಗೆ ಆಹಾರ ನೀಡುವವರು ಮತ್ತು ನಾಯಿ ಪ್ರೇಮಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಬೀದಿನಾಯಿಗಳನ್ನು ಅಷ್ಟೊಂದು ಪ್ರೀತಿಸುವವರು, ಅವುಗಳನ್ನು ಮನೆಗೆ ಏಕೆ ಕೊಂಡೊಯ್ಯುವುದಿಲ್ಲ? ಆ ನಾಯಿಗಳೇಕೆ ಅಲೆದಾಡುತ್ತಾ ಜನರನ್ನು ಬೆದರಿಸುತ್ತವೆ ಮತ್ತು ಕಚ್ಚುತ್ತವೆ' ಎಂದು ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.