ADVERTISEMENT

ರಾಷ್ಟ್ರೀಯ ಪಕ್ಷ ಘೋಷಣೆ: ಉಚಿತ ಮದ್ಯ, ಕೋಳಿ ವಿತರಿಸಿದ ಟಿಆರ್‌ಎಸ್‌ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2022, 11:07 IST
Last Updated 5 ಅಕ್ಟೋಬರ್ 2022, 11:07 IST
ಟಿಆರ್‌‌ಎಸ್ ನಾಯಕ ರಾಜನಾಳ ಶ್ರೀಹರಿ ಅವರು ಸ್ಥಳೀಯರಿಗೆ ಮದ್ಯದ ಬಾಟಲಿ ಮತ್ತು ಕೋಳಿಗಳನ್ನು ವಿತರಿಸಿದ್ದಾರೆ. (ಟ್ವಿಟರ್ ಚಿತ್ರ)
ಟಿಆರ್‌‌ಎಸ್ ನಾಯಕ ರಾಜನಾಳ ಶ್ರೀಹರಿ ಅವರು ಸ್ಥಳೀಯರಿಗೆ ಮದ್ಯದ ಬಾಟಲಿ ಮತ್ತು ಕೋಳಿಗಳನ್ನು ವಿತರಿಸಿದ್ದಾರೆ. (ಟ್ವಿಟರ್ ಚಿತ್ರ)   

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಬುಧವಾರ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಅದರಂತೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಘೋಷಿಸಲಾಗಿದೆ.

ರಾಷ್ಟ್ರೀಯ ಪಕ್ಷದ ಘೋಷಣೆಗೂ ಮುನ್ನವೇ ಟಿಆರ್‌‌ಎಸ್ ನಾಯಕ ರಾಜನಾಳ ಶ್ರೀಹರಿ ಅವರು ವಾರಂಗಲ್‌ನಲ್ಲಿ ಸ್ಥಳೀಯರಿಗೆ ಮದ್ಯದ ಬಾಟಲಿಗಳು ಮತ್ತು ಕೋಳಿಗಳನ್ನು ವಿತರಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ‌ವಾಗಿದೆ.

ರಾಜನಾಳ ಶ್ರೀಹರಿ ಅವರು ಸುಮಾರು 200 ಬಾಟಲಿ ಮದ್ಯ ಹಾಗೂ 200 ಕೋಳಿಗಳನ್ನು ವಿತರಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಶ್ರೀಹರಿ ಕಾರ್ಯವೈಖರಿ ಪ್ರಶ್ನಿಸಿದ ಬಿಜೆಪಿ ವಕ್ತಾರ ಎನ್‌.ವಿ.ಸುಭಾಷ್, ‘ಮದ್ಯ ಮತ್ತು ಕೋಳಿ ಹಂಚುವ ಕೃತ್ಯವು ಜನರ ಸೇವೆ ಮಾಡುವ ಟಿಆರ್‌ಎಸ್‌ನ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡಿಸುತ್ತದೆ ಎಂದು ಟೀಕಿದ್ದಾರೆ.

ತೆಲಂಗಾಣ ಭವನದಲ್ಲಿ ಇಂದು ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಪಕ್ಷದ ಮರುನಾಮಕರಣದ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಟಿಆರ್‌ಎಸ್ ಇನ್ನು ಮುಂದೆ ಬಿಆರ್‌ಎಸ್ ಪಕ್ಷವಾಗಿ ಗುರುತಿಸಿಕೊಳ್ಳಲಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. 'ರಾಷ್ಟ್ರೀಯ ನಾಯಕ ಕೆಸಿಆರ್ ಜಿಂದಾಬಾದ್' ಇತ್ಯಾದಿ ಜಯಘೋಷವನ್ನು ಬೆಂಬಲಿಗರು ಕೂಗಿದರು.

ರಾಷ್ಟ್ರೀಯ ಪಕ್ಷ ಘೋಷಣೆಯೊಂದಿಗೆ ಕೆಸಿಆರ್ ರಾಷ್ಟ್ರ ರಾಜಕಾರಣಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.