ADVERTISEMENT

ಯಾವುದೇ ಧರ್ಮ, ರಾಷ್ಟ್ರೀಯತೆ ಜೊತೆಗೆ ಭಯೋತ್ಪಾದನೆಯ ತಳಕು ಸಲ್ಲದು: ಅಮಿತ್ ಶಾ

ಪಿಟಿಐ
Published 18 ನವೆಂಬರ್ 2022, 12:14 IST
Last Updated 18 ನವೆಂಬರ್ 2022, 12:14 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ‘ಭಯೋತ್ಪಾದನೆಯ ಬೆದರಿಕೆಯನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಗುಂಪಿನ ಜೊತೆಗೆ ತಳಕು ಹಾಕಬಾರದು ಎಂಬುದು ಭಾರತದ ನಿಲುವು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಭಿಪ್ರಾಯ‍ಪಟ್ಟಿದ್ದಾರೆ.

‘ಭಯೋತ್ಪಾದನೆಗೆ ಆರ್ಥಿಕ ನೆರವು ಬೇಡ‘ ವಿಷಯ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ನಿಸ್ಸಂದೇಹವಾಗಿ, ಜಾಗತಿಕ ಶಾಂತಿ, ಭದ್ರತೆಗಿರುವ ಗಂಭೀರ ಬೆದರಿಕೆ. ಇಂಥದಕ್ಕೆ ಆರ್ಥಿಕ ನೆರವು ನೀಡುವುದು ಇನ್ನೂ ಅಪಾಯಕಾರಿ’ ಎಂದು ಹೇಳಿದರು.

ಭಯೋತ್ಪಾದಕರು ಹಿಂಸಾಕೃತ್ಯವನ್ನು ನಡೆಸಲು ಈಗ ನವೀನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಹಣ ಕ್ರೋಡೀಕರಿಸಲು ಯುವಜನರಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಪ್ರಚೋದನಾಕಾರಿ ಅಡಕಗಳ ಪ್ರಚಾರಕ್ಕೆ ಡಾರ್ಕ್‌ನೆಟ್‌ ಬಳಸುತ್ತಿದ್ದಾರೆ ಎಂದು ಶಾ ಹೇಳಿದರು.

ADVERTISEMENT

ಈಗ ಕ್ರಿಪ್ಟೊ ಕರೆನ್ಸಿ ಬಳಕೆಯೂ ಆಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಯೋತ್ಪಾದಕರ ಕೃತ್ಯಗಳು ಹಾಗೂ ಅವರ ಕಾರ್ಯಶೈಲಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಹುಡುಕುವುದು ಅಗತ್ಯವಾಗಿದೆ ಎಂದು ಸಲಹೆ ಮಾಡಿದರು.

ಭಯೋತ್ಪಾದನೆಯ ಚಟುವಟಿಕೆಯು ಈಗ ಎಕೆ–47ನಿಂದ ವರ್ಚುವಲ್‌ ಸ್ವರೂಪಕ್ಕೆ ಸ್ಥಿತ್ಯಂತರವಾಗಿದೆ. ಇದು, ಹೆಚ್ಚು ಕಳವಳಕಾರಿಯಾದುದು. ಪ್ರತಿಯೊಂದು ರಾಷ್ಟ್ರವು ಈ ಸಮಸ್ಯೆಗೆ ಪರಿಹಾರ ಹುಡುಕಲು, ಎದುರಿಸಲು ಸಮಾನ ಕಾರ್ಯತಂತ್ರಕ್ಕೆ ಮುಂದಾಗಬೇಕು ಎಂದರು.

ನೆರೆಯ ಪಾಕಿಸ್ತಾನ ಮತ್ತು ಚೀನಾ ದೇಶಗಳ ವಿರುದ್ಧ ಪರೋಕ್ಷವಾಗಿ ದಾಳಿ ನಡಸಿದ ಗೃಹ ಸಚಿವರು, ಒಟ್ಟಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮಗಳ ಯತ್ನದಿಂದ ಕೆಲ ರಾಷ್ಟ್ರಗಳು ಹಿಂದೆ ಸರಿಯುತ್ತಿವೆ ಎಂದು ಅಭಿಪ್ರಾಯಪಟ್ಟರು.

‘ಕೆಲವು ರಾಷ್ಟ್ರಗಳು ಭಯೋತ್ಪಾದಕರಿಗೆ ಆಶ್ರಯ ನೀಡಿರುವುದನ್ನೂ ನಾವು ಗಮನಿಸಿದ್ದೇವೆ. ಭಯೋತ್ಪಾದಕರಿಗೆ ರಕ್ಷಣೆ ನೀಡುವುದು, ಅದನ್ನು ಬೆಳೆಸುವುದಕ್ಕೆ ಸಮನಾದುದು. ಭಯೋತ್ಪಾದನೆಯ ಕೃತ್ಯಗಳನ್ನು ಹತ್ತಿಕ್ಕುವುದು ಸಂಘಟಿತ ಯತ್ನವಾಗಬೇಕು‘ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.