ADVERTISEMENT

Terrorism: ‘ಪ್ಯಾನ್‌–ಇಂಡಿಯಾ’ ಭಯೋತ್ಪಾದನೆಗೆ ಸಂಚು

ಕಾಶ್ಮೀರದಿಂದ ಉತ್ತರಪ್ರದೇಶಕ್ಕೆ ಆದಿಲ್ ಸ್ಥಳಾಂತಗೊಂಡಿದ್ದೇ ಪ್ರಮುಖ ತಿರುವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 19:30 IST
Last Updated 12 ನವೆಂಬರ್ 2025, 19:30 IST
.
.   

ಶ್ರೀನಗರ: ಕಾಶ್ಮೀರದ ಯುವ ವೈದ್ಯ ಡಾ.ಆದಿಲ್‌ ಅಹ್ಮದ್‌ ರಾಠರ್‌ 2024ರ ಅಕ್ಟೋಬರ್‌ನಲ್ಲಿ ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತೊರೆದು ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರ ವೈದ್ಯನಾಗಿ ಸೇರ್ಪಡೆಯಾಗಿದ್ದ. ರಾಠರ್‌ನ ಸ್ಥಳಾಂತರವು ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಪಿತೂರಿಯ ಆರಂಭಿಕ ಹೆಜ್ಜೆಯಾಗಿತ್ತು ಎಂಬ ಅಂಶ ಈಗ ಬಯಲಾಗಿದೆ.

‘ಪ್ಯಾನ್‌–ಇಂಡಿಯಾ ಭಯೋತ್ಪಾದನೆಗೆ ಒಂದು ವರ್ಷದ ಹಿಂದಿನಿಂದಲೇ ಕಾರ್ಯತಂತ್ರ ಹೆಣೆಯಲಾಗುತ್ತಿತ್ತು. ಕಾಶ್ಮೀರದಿಂದ ಉತ್ತರ ಪ್ರದೇಶಕ್ಕೆ ಆದಿಲ್ ಸ್ಥಳಾಂತರಗೊಂಡಿದ್ದು ಆಕಸ್ಮಿಕ ಘಟನೆ ಅಲ್ಲ; ಅದು ಕಾಶ್ಮೀರದ ಆಚೆಗೂ ಉಗ್ರ ಜಾಲವನ್ನು ವಿಸ್ತರಿಸುವ ಯೋಜನೆಯ ಭಾಗವಾಗಿತ್ತು’ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ವೈದ್ಯರಿಂದ ಭಯೋತ್ಪಾದನೆ ಕಾರ್ಯತಂತ್ರ’ದ ಮೂಲಕ ಶಿಕ್ಷಿತ ವೃತ್ತಿಪರರ ವಿಶ್ವಾಸಾರ್ಹತೆಯನ್ನೇ ಬಂಡವಾಳ ಮಾಡಿಕೊಂಡು, ಯಾವುದೇ ಅನುಮಾನ ಬಾರದಂತೆ ಉತ್ತರ ಭಾರತದಾದ್ಯಂತ ಉಗ್ರರ ಜಾಲಗಳನ್ನು ಸೃಷ್ಟಿಸಲಾಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡ ಬಳಿಕ, ಆದಿಲ್ ಮತ್ತು ಆತನ ಸಹಚರರು ದೆಹಲಿ ಮತ್ತು ಫರೀದಾಬಾದ್‌ನಂಥ ನಗರಗಳಲ್ಲಿರುವ ಕಾಶ್ಮೀರಿ ಮತ್ತು ಸ್ಥಳೀಯ ವೃತ್ತಿಪರರಲ್ಲಿ ತಮ್ಮ ಸಿದ್ಧಾಂತಕ್ಕೆ ಬೆಂಬಲ ನೀಡುವವರನ್ನು ಗುರುತಿಸಲು ಆರಂಭಿಸಿದರು. ಬಾಡಿಗೆ ಮನೆ ಮಾಡಿದರು. ಇಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅಲ್ಲಿ ಸಭೆಗಳನ್ನು ನಡೆಸಲಾಗುತ್ತಿತ್ತು ಎಂಬುದು ಪೊಲೀಸರ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.

ಆದಿಲ್ ನಿಕಟವರ್ತಿ ಡಾ.ಮುಜಮ್ಮಿಲ್‌ ಶಕೀಲ್‌ ನಿವಾಸದಲ್ಲಿ ಅಪಾರ ಪ್ರಮಾಣದ ಸ್ಫೋಟಕ ತಯಾರಿಕಾ ಸಾಮಗ್ರಿಗಳು ಪತ್ತೆಯಾಗಿವೆ. ಈ ಮೂಲಕ ಬಹುದೊಡ್ಡ ಉಗ್ರ ಜಾಲವನ್ನು ಭೇದಿಸಿರುವ ಪೊಲೀಸರು, ಉಗ್ರರು ಹೊಸ ಭಯೋತ್ಪಾದನೆ ಮಾದರಿಯನ್ನು ಬಳಸಿಕೊಂಡು ದೇಶದ ಹಲವು ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಿರಬಹುದು ಎಂದು ಶಂಕಿಸಿದ್ದಾರೆ.

‘ಸರಣಿ ಸ್ಫೋಟ ನಡೆಸುವ ಮೂಲಕ ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸುವ ಮತ್ತು ದೇಶದ ನಾಗರಿಕರಲ್ಲಿ ಭಯ ಹುಟ್ಟಿಸುವ ಯೋಜನೆಯನ್ನು ರೂಪಿಸಲಾಗಿತ್ತು’ ಎಂದು ತನಿಖೆಯಲ್ಲಿ ಭಾಗಿಯಾಗಿರುವ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೊಸ ಮಾದರಿಯ ಸೈದ್ಧಾಂತಿಕ ಬೇರುಗಳು ದಕ್ಷಿಣ ಕಾಶ್ಮೀರದಲ್ಲಿ ಇದ್ದರೂ, ದೇಶದಾದ್ಯಂತ ದಾಳಿ ನಡೆಸಲು ನೀಲನಕ್ಷೆ ರೂಪಿಸಲಾಗಿತ್ತು. ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಂಚರಿಸಲು ಸ್ಥಳಾಂತರಗೊಂಡ ವೃತ್ತಿಪರರು, ಇಂಟರ್ನಿಗಳು, ವೈದ್ಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ದೇಶದಾದ್ಯಂತ ಸುಗಮ ಕಾರ್ಯಾಚರಣೆಗೆ ವೃತ್ತಿಪರರ ಜಾಲವನ್ನೇ ಸೃಷ್ಟಿಸಲಾಗಿತ್ತು’ ಎಂದು ಅವರು ತಿಳಿಸಿದರು.

‘ಸೇನಾಪಡೆಗಳ ನಿರಂತರ ಕಾರ್ಯಾಚರಣೆಯಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಉಗ್ರರು ತಮ್ಮ ನೆಲೆಗಳನ್ನು ಸ್ಥಳಾಂತರಿಸಬೇಕೆಂಬ ಉದ್ದೇಶದಿಂದ ಅನುಮಾನಕ್ಕೆ ಆಸ್ಪದವಿರದ ರೀತಿಯಲ್ಲಿ ಶಿಕ್ಷಿತ ವೃತ್ತಿಪರರನ್ನು ಬಳಸಿಕೊಂಡು ಸುರಕ್ಷಿತ ಮನೆ, ಬ್ಯಾಂಕ್‌ ಖಾತೆ, ಪೂರೈಕೆ ಸರಪಳಿ ಸೇರಿದಂತೆ ಮೂಲಸೌಕರ್ಯಗಳನ್ನು ಪಡೆದಿದ್ದಾರೆ’ ಎಂದು ಹೇಳಿದರು.

ಬಹುಸ್ತರದಲ್ಲಿ ಕಾರ್ಯನಿರ್ವಹಣೆ

ಹೊಸ ಮಾದರಿಯ ಭಯೋತ್ಪಾದನೆಯಲ್ಲಿ ಸುಶಿಕ್ಷಿತ ವ್ಯಕ್ತಿಗಳು ತಮ್ಮ ಕಾರ್ಯಸೂಚಿಗಳ ಅನುಷ್ಠಾನಕ್ಕಾಗಿ ವೃತ್ತಿ ಮಾಡುತ್ತಿರುವ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದೆಂಬ ಎಚ್ಚರಿಕೆಯನ್ನು ಈ ಪ್ರಕರಣವು ನೀಡಿದೆ. ಈ ಮಾದರಿಯು ಬಹುಸ್ತರದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಒಬ್ಬರು ಅಗತ್ಯ ವಸ್ತುಗಳನ್ನು ಹೊಂದಿಸುವುದು ಮತ್ತು ಹಣ ಸಂಗ್ರಹ ಮಾಡುವುದರತ್ತ ಗಮನ ವಹಿಸಿದರೆ ಇನ್ನೊಬ್ಬರು ನೇಮಕಾತಿ–ಸಿದ್ಧಾಂತ ಪ್ರಚಾರದತ್ತ ಗಮನ ನೀಡುತ್ತಾರೆ. ಕೆಲವು ಶಂಕಿತರು ವೈದ್ಯಕೀಯ ಮತ್ತು ಅಕಾಡೆಮಿಕ್‌ ಫೆಲೊಶಿಪ್‌ ಸೋಗಿನಲ್ಲಿ ವಿದೇಶಕ್ಕೆ ತೆರಳಿ ಅಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.

‘ಕನಿಷ್ಠ 10ರಿಂದ 12 ಮಂದಿ ವೈದ್ಯಕೀಯ ವೃತ್ತಿಪರರು ಉಗ್ರ ಕೃತ್ಯಕ್ಕೆ ಸಹಕಾರ ನೀಡಿರುವ ಶಂಕೆ ಇದ್ದು ಅವರ ಮೇಲೆ ಕಣ್ಗಾವಲಿಡಲಾಗಿದೆ. ಅರಣ್ಯದಲ್ಲಿ ಬಂದೂಕು ಹಿಡಿಯುತ್ತಿದ್ದ ಭಯೋತ್ಪಾದಕರು ತಮ್ಮ ಕಾರ್ಯವಿಧಾನವನ್ನು ಬದಲಿಸಿ ಪ್ರಯೋಗಾಲಯಗಳಲ್ಲಿ ಬಾಂಬ್‌ ತಯಾರಿಸುವ ಹಂತಕ್ಕೆ ಬದಲಾಗಿರುವುದು ದಿಗಿಲು ಹುಟ್ಟಿಸುವಂತಿದೆ’ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.