ADVERTISEMENT

ಠಾಣೆ :ಸೈಬರ್ ಅಪರಾಧಗಳ ಕಡಿವಾಣಕ್ಕೆ 'ಸೈಬರ್ ವಾರಿಯರ್ಸ್' ತನಿಖಾ ತಂಡ ನೇಮಕ

ಪಿಟಿಐ
Published 26 ಆಗಸ್ಟ್ 2025, 11:15 IST
Last Updated 26 ಆಗಸ್ಟ್ 2025, 11:15 IST
   

ಠಾಣೆ: ನಗರದಲ್ಲಿ ತಳಮಟ್ಟದಿಂದಲೇ ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚಲು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ‘ಸೈಬರ್ ವಾರಿಯರ್ಸ‘ ಹೆಸರಿನ ಸೈಬರ್‌ ತಂಡವನ್ನು ನೇಮಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಠಾಣೆಯ ಪೊಲೀಸ್‌ ಆಯುಕ್ತ ಅಶುತೋಷ್ ದುಂಬಾರೆ ಅವರ ಮಾರ್ಗದರ್ಶನದಲ್ಲಿ ಈ ತಂಡವು ರಚನೆಯಾಗಿದೆ. ಈ ತಂಡದಲ್ಲಿ ಹೊಸದಾಗಿ ನೇಮಕಗೊಂಡ 72 ಸೈಬರ್ ಯೋಧರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು ‘ಸೈಬರ್‌ ವಾರಿಯರ್ಸ್‌‘ ಅಡಿ ನಗರದಾದ್ಯಂತ 150 ಸೈಬರ್ ಯೋಧರನ್ನು ನೇಮಿಸಲಾಗುವುದು ಎಂದು ಹೇಳಿದರು. 

ಸೈಬರ್‌ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ಉದ್ದೇಶದಿಂದ ಈ ಹಿಂದೆ ಮೀಸಲು ಸೈಬ‌ರ್‌ ವಿಭಾಗವನ್ನು ಸ್ಥಾಪನೆ ಮಾಡಿದ್ದೆವು. ಈಗ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತಿದೆ. ಇದರ ಭಾಗವಾಗಿ ಸೈಬರ್ ಯೋಧರನ್ನು ನೇಮಕ ಮಾಡಲಾಗಿದೆ ಎಂದು ಸಮಾರಂಭದಲ್ಲಿ ದುಂಬಾರೆ ಹೇಳಿದರು.

ADVERTISEMENT

ಆಯ್ಕೆಯಾದವರು ಪ್ರಧಾನ ಮಂತ್ರಿ ಯುವ ಶಿಕ್ಷಣ ಯೋಜನೆ ಹಾಗೂ ನುರಿತ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ತರಬೇತಿ ಪಡೆದ ಯೋಧರಾಗಿದ್ದಾರೆ. ಇವರನ್ನು ಠಾಣೆಯ ವಿವಿಧ ಪೊಲೀಸ್ ಠಾಣೆಗಳ ಸೈಬರ್ ಕೋಶಗಳ ಸಹಾಯಕರಾಗಿ ನಿಯೋಜಿಸಲಾಗಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪ್ರತಿ ಪೊಲೀಸ್‌ ಠಾಣೆಗೆ 4 ಜನ ಸೈಬರ್‌ ಯೋಧರನ್ನು ನೇಮಿಸಲಾಗುತ್ತದೆ. ಸೈಬರ್‌ ಸೆಕ್ಯೂರಿಟಿ ಹಾಗೂ ಎಐ ತಂತ್ರಜ್ಞಾನದಲ್ಲಿ ಪರಿಣಿತಿ ಪಡೆದ ಇವರು ಕ್ಲಿಷ್ಠಕರವಾದ ಸೈಬರ್‌ ಅಪರಾಧಗಳನ್ನು ಭೇದಿಸಲು ಅಗತ್ಯ ತಾಂತ್ರಿಕ ನೆರವನ್ನು ನೀಡಲಿದ್ದಾರೆ ಎಂದು ಆಯುಕ್ತರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.