ಮುಂಬೈ/ಬೆಂಗಳೂರು: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ‘ಡ್ರೀಮ್‌ಲೈನರ್’ ಪತನಗೊಂಡು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ನೀಡಬೇಕಾದ ವಿಮಾ ಪರಿಹಾರ ಮೊತ್ತವು ₹1 ಸಾವಿರದಿಂದ ₹1,200 ಕೋಟಿಯಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.
ಡ್ರೀಮ್‌ಲೈನರ್‌ನಂತಹ ಬೃಹತ್ ವಿಮಾನಗಳ ಕಾರ್ಯಾಚರಣೆ ನಡೆಸುವ ಏಷ್ಯಾದ ವಿಮಾನಯಾನ ಸಂಸ್ಥೆಗಳಿಗೆ ಈ ಪ್ರಮಾಣದ ವಿಮಾ ಪರಿಹಾರವು ಹೊರೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಹಮದಾಬಾದ್‌ನಲ್ಲಿ ಪತನಗೊಂಡಿರುವ ಡ್ರೀಮ್‌ಲೈನರ್ 2013ರ ಮಾದರಿಯ ವಿಮಾನ. ಇದು ಸರ್ದಾರ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಗುರುವಾರ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ, ಮೇಘಾನಿನಗರ ಪ್ರದೇಶದಲ್ಲಿ ಪತನಗೊಂಡಿತ್ತು.
230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಜನರು ಈ ನತದೃಷ್ಟ ವಿಮಾನದಲ್ಲಿದ್ದರು. ಈ ಪೈಕಿ, ಒಬ್ಬ ಪ್ರಯಾಣಿಕ ಬದುಕುಳಿದಿದ್ದಾರೆ.
ಏರ್ ಇಂಡಿಯಾ ಮುಖ್ಯಸ್ಥರು ಆಗಿರುವ ಟಾಟಾ ಸನ್ಸ್ ಚೇರಮನ್ ಎನ್.ಚಂದ್ರಶೇಖರನ್ ಅವರು, ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ಘೋಷಿಸಿದ್ದಾರೆ.
‘ಬೋಯಿಂಗ್ ವಿಮಾನ (787–8) ಪತನಗೊಂಡಿದ್ದರಿಂದಾಗಿ ಕಂಪನಿಗೆ ಭಾರಿ ನಷ್ಟವಾಗಿದೆ. ವಿಮಾನಕ್ಕೆ ₹600–700 ಕೋಟಿಯಷ್ಟು ವಿಮೆ ಮಾಡಿಸಲಾಗಿತ್ತು’ ಎಂದು ವಿಮಾ ಕ್ಷೇತ್ರದ ಮೂಲಗಳು ಹೇಳುತ್ತವೆ.
ಪ್ರಯಾಣಿಕರು ಮೃತಪಟ್ಟಲ್ಲಿ ಇಲ್ಲವೇ ಗಾಯಗೊಂಡ ಸಂದರ್ಭದಲ್ಲಿ, ಭಾರತದಲ್ಲಿ ವಿಮಾನಯಾನ ಕಂಪನಿಗಳು ‘ಕ್ಯಾರಿಯೇಜ್ ಬೈ ಏರ್ ಆ್ಯಕ್ಟ್–1872’ ಅಡಿ ಪರಿಹಾರ ನೀಡುತ್ತವೆ. ಮಾಂಟ್ರಿಯಲ್ ಒಪ್ಪಂದದ ಅನ್ವಯ ಈ ಕಾಯ್ದೆಗೆ 1999ರಲ್ಲಿ ತಿದ್ದುಪಡಿ ತರಲಾಗಿದೆ.
ಈ ಒಪ್ಪಂದದಂತೆ, ವಿಮಾನ ಅಪಘಾತಗಳಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು. ಅಹಮದಾಬಾದ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 241 ಪ್ರಯಾಣಿಕರು ಮೃತಪಟ್ಟಿದ್ಧಾರೆ. ಹೀಗಾಗಿ, ಪರಿಹಾರ ಮೊತ್ತವು ₹241 ಕೋಟಿ ಆಗಲಿದೆ.
ಆದರೆ, ಕಾನೂನು ಹೋರಾಟಗಳ ಬಳಿಕ ಕ್ಲೇಮುಗಳಲ್ಲಿ ಆಗುವ ಹೆಚ್ಚಳ ಹಾಗೂ ಅಂತಿಮವಾಗಿ ನೀಡಬೇಕಾದ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡಾಗ, ವಿಮಾ ಪರಿಹಾರ ಮೊತ್ತ ₹1,000– ₹1,500 ಕೋಟಿಯಷ್ಟು ಆಗಲಿದೆ ಎಂಬ ಅಂದಾಜಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.